ಗೋಕಾಕ್

ಮಕ್ಕಳಿಗೆ ಶಿಕ್ಷಣದೊಂದಿಗೆ ಕ್ರಿಯಾತ್ಮಕ ಕೌಶಲ್ಯವೂ ಅತ್ಯಂತ ಪ್ರಮುಖ

ಮಕ್ಕಳಿಗೆ ಶಿಕ್ಷಣದೊಂದಿಗೆ ಕ್ರಿಯಾತ್ಮಕ ಕೌಶಲ್ಯವೂ ಅತ್ಯಂತ ಪ್ರಮುಖ

ಕೃಷ್ಣಾ ಸಹೋದಯ ಸಿಬಿಎಸ್‌ಇ ಶಾಲೆಗಳ ಪ್ರಾಚಾರ್ಯರ ಸಭೆಯಲ್ಲಿ ಪ್ರಾಚಾರ್ಯ ದತ್ತಾತ್ರೇಯ ಮುನಸೆ ಅಭಿಮತ 

ಹಾರೂಗೇರಿ 24: ಮಕ್ಕಳು ಅಕ್ಷರ ಕಲಿತರೆ ಸಾಲದು, ಅವರಲ್ಲಿ ನೈತಿಕ ಶಿಕ್ಷಣದ ಜೊತೆಗೆ ಕ್ರಿಯಾತ್ಮಕ ಕೌಶಲ್ಯವೂ ಅತ್ಯಂತ ಪ್ರಮುಖವಾಗಿದೆ. ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಅನಾವರಣಗೊಳ್ಳಲು ಪಠ್ಯದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಸೂಕ್ತ ವೇದಿಕೆಯಾಗಿದೆ. ಇದೇ ಕೃಷ್ಣಾ ಸಹೋದಯದ ಮೂಲ ಉದ್ದೇಶವಾಗಿದೆ ಎಂದು ಪ್ರಾಚಾರ್ಯ ದತ್ತಾತ್ರೇಯ ಮುನಸೆ ಹೇಳಿದರು. 

ಪಟ್ಟಣದ ಎಸ್‌.ಬಿ.ದರೂರ ಕೇಂದ್ರೀಯ ಸಿಬಿಎಸ್‌ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ನಡೆದ ಬೆಳಗಾವಿ ದಕ್ಷಿಣ ವಲಯದ ಕರ್ನಾಟಕ ಕೃಷ್ಣಾ ಸಹೋದಯ ಸಿಬಿಎಸ್‌ಇ ಶಾಲೆಗಳ ಪ್ರಾಚಾರ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಉತ್ತಮ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ಶಿಕ್ಷಣ ನೀಡುವುದರೊಂದಿಗೆ ಮಕ್ಕಳಲ್ಲಿ ಭಾಷಾ ಕೌಶಲ್ಯಗಳು, ಪರಸ್ಪರ ಸಂವಹನ ಕೌಶಲ್ಯಗಳು ಮತ್ತು ಜೀವನ ಕೌಶಲ್ಯಗಳಿಗೆ ಆದ್ಯತೆ ನೀಡಬೇಕಿದೆ. ಮೌಲ್ಯಾಧಾರಿತ ಶಿಕ್ಷಣ ನಮ್ಮ ಸಮಾಜದಲ್ಲಿ ಇಂದು ಅತ್ಯಂತ ಮುಖ್ಯವಾಗಿದೆ. ಮಕ್ಕಳು ಸಾಮಾಜಿಕವಾಗಿ ಬೆಳೆಯಲು ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಪ್ರಾಚಾರ್ಯ ಮುನಸೆ ಹೇಳಿದರು. 

ಪ್ರಾಚಾರ್ಯರ ಸಭೆಯಲ್ಲಿ ಸಹೋದಯ ಶಾಲೆಗಳ ಮೂಲಕ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಆಯೋಜನೆ, ಶಿಕ್ಷಕರಿಗೆ ತರಬೇತಿ, ಸಿಬಿಎಸ್‌ಇ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳು, ಪ್ರತಿ ಶಾಲೆಗೂ ಸಹೋದಯ ವತಿಯಿಂದ ಸದಸ್ಯತ್ವ ಪತ್ರ ನೀಡುವುದು ಮೊದಲಾದ ವಿಷಯಗಳನ್ನು ಚರ್ಚಿಸಲಾಯಿತು.  

ಈ ವೇಳೆ ಬೆಳಗಾವಿ ದಕ್ಷಿಣ ವಲಯದ ಸಿಬಿಎಸ್‌ಇ ಶಾಲೆಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷರನ್ನಾಗಿ ಪ್ರಾಚಾರ್ಯ ದತ್ತಾತ್ರೇಯ ಮುನಸೆ, ಉಪಾಧ್ಯಕ್ಷರಾಗಿ ಬೋರಗಾಂವದ ಶಮಿಕಾ ಶಹಾ, ಕಾರ್ಯದರ್ಶಿಯಾಗಿ ಬೆಲ್ಲದ ಬಾಗೇವಾಡಿಯ ಎಂ.ಎಂ.ಪಾಟೀಲ, ಖಜಾಂಚಿ ಡಾ.ಮಿಥುನ್ ದೇಶಪಾಂಡೆ ಹಾಗೂ ಸಹಕಾರ್ಯದರ್ಶಿಯನ್ನಾಗಿ ಮಹೀಶವಾಡಗಿಯ ರಾಹುಲ ಕೊಟಗಿ ಅವರನ್ನು ಆಯ್ಕೆ ಮಾಡಲಾಯಿತು. 

ಸಭೆಯಲ್ಲಿ ಪ್ರಾಚಾರ್ಯರಾದ ತೈಸಿಮಾ, ನಿಂಗನೂರೆ, ಪದ್ಮರಾಜ, ನಿಡಗುಂದೆ, ಪ್ರಕಾಶ ಚಿಂಚಲಿ, ಜಗದೀಶ ಹವಾಲ್ದಾರ, ನಾಯಿಕ, ಸಂಜು ರಜನ, ಎಂ.ಎಂ.ಪಾಟೀಲ, ಅಶೋಕ ತುಪ್ಪದ, ಡಾ.ಪ್ರಿಕ್ಷಿತ ಚಿಬ್ಬೇರ, ಶಂಕರಯ್ಯ ಮಠಪತಿ, ಸಾಗರ ಖೊಂಡರೆ ಮೊದಲಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ