ರಾಣೆಬೆನ್ನೂರ

ಕಣ್ಣು ಮನುಷ್ಯನ ಅವಿಭಾಜ್ಯ ಅಂಗ ಕಣ್ಣಿಲ್ಲದೇ ಬದುಕು ಅಸಾಧ್ಯ: ಅರಕೇರಿ

ಕಣ್ಣು ಮನುಷ್ಯನ ಅವಿಭಾಜ್ಯ ಅಂಗ ಕಣ್ಣಿಲ್ಲದೇ ಬದುಕು ಅಸಾಧ್ಯ: ಅರಕೇರಿ

ರಾಣೀಬೆನ್ನೂರ 10: ಕಣ್ಣು ಪ್ರತಿಯೊಬ್ಬ ಮನುಷ್ಯನ ಅವಿಭಾಜ್ಯ ಅಂಗ ಕಣ್ಣಿಲ್ಲದೇ ಬದುಕು ಅಸಾಧ್ಯ ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮ ವಯೋಮಿತಿ ಅನುಗುಣವಾಗಿ ತಪಾಸಣೆಗೊಳಪಡುವುದರ ಮೂಲಕ ಮುಂದಾಗುವ ತೊಂದರೆಗಳನ್ನು ಇಂದೇ ನಿವಾರಿಸಿಕೊಳ್ಳಲು ಮುಂದಾಗಬೇಕು ಎಂದು ಎಂ ಜಿ ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲೇಶಪ್ಪ ಅರಕೇರಿ ಕರೆ ನೀಡಿದರು. 

ಅವರು ಶನಿವಾರ ಇಲ್ಲಿನ ಲಯನ್ಸ ಶಾಲಾ ಆವರಣದಲ್ಲಿ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಿವಮೊಗ್ಗ ಕಣ್ಣಿನ ಆಸ್ಪತ್ರೆ, ಲಯನ್ಸ್ ಸಂಸ್ಥೆ, ಸ್ವಾ ಕರವೇ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಅಂಧತ್ವ ನಿವಾರಣಾ ಸಮಿತಿ, ನೇತ್ರ ಸಂಚಾರಿ ಘಟಕ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಅಂಧತ್ವವನ್ನು ಹೊಂದಿದವರು ಅಪಾರ ಪ್ರಮಾನದಲ್ಲಿದ್ದಾರೆ. ಅಂಧತ್ವ ನಿವಾರಣೆಗಾಗಿ ತಮ್ಮ ಸೇವಾ ಸಂಸ್ಥೆಯು ಸೇರಿದಂತೆ ಅನೇಕ ಸಂಘಟನೆಗಳು ಮತ್ತು ವಿಶೇಷವಾಗಿ ಶಂಕರ ಕಣ್ಣಿನ ಆಸ್ಪತ್ರೆಯು ಬಡವರ ಸೇವೆಗಾಗಿ ತೊಡಗಿಸಿಕೊಂಡಿವೆ. ಬಡವರ ಸೇವೆಯೇ ಭಗವಂತನ ಸೇವೆ ಎನ್ನುವ ತತ್ವದ ಅಡಿಯಲ್ಲಿ ಎಲ್ಲ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು. 

ಪ್ರಾಸ್ಥಾವಿಕವಾಗಿ ಮಾತನಾಡಿದ ಜಿಲ್ಲಾ ನೇತ್ರ ಸಂಚಾರಿ ಘಟಕದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜೆ ಎಂ ರಾಜಶೇಖರ ಅವರು  ಸರ್ಕಾರ ಹಿರಿಯ ನಾಗರೀಕರಿಗಾಗಿ ಉಚಿತವಾಗಿ ಕಣ್ಣಿನ ಒತ್ತಡ, ತಪಾಸಣೆ ಮಾಡುವುದರ ಜೊತೆಗೆ ಇಂದು ಸಂಘ-ಸಂಸ್ಥೆಗಳು ತಮ್ಮ ಸಾಮಾಜಿಕ ಸೇವೆಯ ಅಡಿಯಲ್ಲಿ ಪೊರೆ ತಪಾಸಣೆ ಅಗತ್ಯವಿರುವವರಿಗೆ ಶಸ್ತ್ರ ಚಿಕಿತ್ಸೆ ಸಹ ನೀಡುತ್ತಲಿವೆ. ಕಣ್ಣಿನ ಬಗ್ಗೆ ನಿಷ್ಕಾಳಜಿ ತೋರದೇ ಹಿರಿಯರು ಕಡ್ಡಾಯವಾಗಿ ತಪಾಸಣಗೊಳಪಟ್ಟು ಮುಂದಾಗಬಹುದಾದ ಬಿಪಿ, ಶುಗರ್ ಮತ್ತಿತರೆ ಖಾಯಿಲೆಗಳಿಂದ ಮುಕ್ತರಾಗಬೇಕು ಎಂದು ಕರೆ ನೀಡಿದರು.

ಲಯನ್ಸ್ ಅಧ್ಯಕ್ಷ ಜಯಣ್ಣ ಮುಚಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಎಸ್.ಬಿ. ಗುರಿಕಾರ, ಮಾಜಿ ಅಧ್ಯಕ್ಷ ಅಶೋಕ ಹೊಟ್ಟಿಗೌಡ್ರ, ಟಿ.ಸಿ.ಪಾಟೀಲ, ಗುತ್ತೆಪ್ಪ ಪೂಜಾರ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಡಾ.ವಿಕ್ರಂ ಸಣ್ಣಮನಿ, ಡಾ.ಶರಣ್ ಚೌಧರಿ, ಬಿ.ಎನ್.ಪಾಟೀಲ,  ಉಮಾ ಮುದಗಲ್‍ಮಠ ಪ್ರಾರ್ಥಿಸಿದರು, ಎಂ.ಜಿ.ಮಣ್ಣಮ್ಮನವರ ಸ್ವಾಗತಿಸಿ, ಆರ್.ವಿ. ಸೂರಗೊಂಡ ನಿರೂಪಿಸಿ, ಎಂ.ಹೆಚ್.ಪಾಟೀಲ ವಂದಿಸಿದರು.

ಸುದ್ದಿ ಓದಿ