ಮುಕ್ತ ರಸಪ್ರಶ್ನೆ ಪರೀಕ್ಷೆ: ಕರಪತ್ರ ಬಿಡುಗಡೆ
ಅಥಣಿ 24: ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಮುಕ್ತ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ನಾಡಿನ ಎಲ್ಲಾ ವಿದ್ಯಾರ್ಥಿಗಳು, ಕಾಲೇಜಿನ ಯುವಕ-ಯುವತಿಯರು , ಶಿಕ್ಷಕರು, ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ತಯಾರಾಗಿರುವ ಸ್ಪರ್ಧಾಳುಗಳು ರಸಪ್ರಶ್ನೆ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯದರ್ಶಿ ರವಿ ಪೂಜಾರಿ ಹೇಳಿದರು.
ಅವರು ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಲಯದಲ್ಲಿ ರಸಪ್ರಶ್ನೆ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಾಲಾ ಮಕ್ಕಳಲ್ಲಿ ಕನ್ನಡ ಭಾಷೆಯ ಜಾಗೃತಿಯ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಕುಮಾರ್ ಶೆಟ್ಟಿ ಬಣ ) ತಾಲೂಕ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಈಗಾಗಲೇ ಮೊದಲನೇ ಹಂತದ ಕಾರ್ಯಕ್ರಮ ರಾಜ್ಯಮಟ್ಟದ ಮುಕ್ತ ಆನ್ಲೈನ್ ಭಾಷಣ ಸ್ಪರ್ಧೆಯನ್ನು ಯಶಸ್ವಿಗೊಳಿಸಿ ಬಹುಮಾನ ವಿತರಿಸಲಾಗಿದೆ. ಎರಡನೇ ಹಂತದ ಈ ರಸಪ್ರಶ್ನೆ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲಾ ವಿಭಾಗ, ಪ್ರೌಢ ಶಾಲಾ ವಿಭಾಗ ಮತ್ತು ಕಾಲೇಜು ವಿಭಾಗ ಜೊತೆಗೆ ಮುಕ್ತ ವಿಭಾಗ ಎಂಬ ಮೂರು ಹಂತದಲ್ಲಿ ರಸ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಲಿಖಿತ ಪರೀಕ್ಷೆ ನಡೆಸಲಾಗುವುದು. ಬರುವ ಡಿಸೆಂಬರ್ 5ರಂದು ಮುಂಜಾನೆ 11 ಗಂಟೆಗೆ ಅಥಣಿ ಪಟ್ಟಣದ ಲಕ್ಷ್ಮೀನಾರಾಯಣ್ ನಗರದಲ್ಲಿರುವ ವಿವೇಕಾನಂದ ವಿದ್ಯಾ ವಿಕಾಸ ಸಂಸ್ಥೆಯಲ್ಲಿ ರಸಪ್ರಶ್ನೆ ಪರೀಕ್ಷೆ ಜರುಗಲಿದೆ. ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಪ್ರವೇಶ ಶುಲ್ಕ ಸಂದಾಯ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು. ರಸಪ್ರಶ್ನೆ ಕಾರ್ಯಕ್ರಮದಲ್ಲಿ 50 ಪ್ರಶ್ನೆಗಳ ಪ್ರಶ್ನೆಪತ್ರಿಕೆಯನ್ನು ಕೇವಲ 60 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಬಹುತೇಕ ಪ್ರಶ್ನೆಗಳು ಕನ್ನಡ ನಾಡು-ನುಡಿಗೆ ಸಂಬಂಧಿಸಿದ್ದಾಗಿರುತ್ತವೆ. ಅಲ್ಲದೆ ಕೆಲವು ಪ್ರಚಲಿತ ವಿಷಯಗಳನ್ನ ಅಳವಡಿಸಲಾಗುತ್ತದೆ. ಪರೀಕ್ಷೆ ನಂತರ ಉತ್ತರಗಳನ್ನು ಪ್ರಕಟಿಸಲಾಗುವುದು, ಬಹುಮಾನ ವಿತರಣೆ ಕಾರ್ಯಕ್ರಮವನ್ನು ದಿನವನ್ನು ನಂತರ ಪ್ರಕಟಿಸಲಾಗುವುದು ಎಂದು ಹೇಳಿದ ಅವರು ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿ ಬಹುಮಾನ ನೀಡಿ ಪ್ರಾಯೋಜಕರಿಗೆ ಮತ್ತು ಸಹಾಯ ಸಹಕಾರ ನೀಡಿದ ಎಲ್ಲಾ ಕನ್ನಡಾಭಿಮಾನಿಗಳಿಗೆ ಅಭಿನಂದಿಸಿದರು.
ಈ ವೇಳೆ ಶಿಕ್ಷಣತಜ್ಞ ಡಿ ಡಿ ಮೇಕನಮರಡಿ, ಕರವೇ ಜಿಲ್ಲಾ ಸಂಚಾಲಕ ಜಗನ್ನಾಥ್ ಬಾಮನೆ, ಸಂತೋಷ್ ಭಡ್ಕಂಬಿ, ಕುಮಾರ್ ಬಡಿಗೇರ್, ಶಂಕರ್ ಮಗದುಮ್, ಪ್ರಶಾಂತ ತೊಡ್ಕರ್, ಪ್ರದೀಪ್ ಜಾದವ್, ಶಶಿಧರ್ ಬರಲಿ ಇನ್ನಿತರರು ಉಪಸ್ಥಿತರಿದ್ದರು.