ಬೈಲಹೊಂಗಲ

ಶ್ರೀ ಸಿದ್ಧಾರೂಢ ಮಂದಿರದ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ

ಶ್ರೀ ಸಿದ್ಧಾರೂಢ ಮಂದಿರದ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ

ಬೈಲಹೊಂಗಲ 05: ಮಠ-ಮಂದಿರಗಳಿಗೆ ನೀಡುವ ಸರಕಾರದ ಅನುದಾನವನ್ನು ಆಡಳಿತ ಮಂಡಳಿ ಸದಸ್ಯರು ಸದುಪಯೋಗ ಮಾಡಿಕೊಂಡು ಭಕ್ತರಿಗೆ ಅನುಕೂಲ ಒದಗಿಸಬೇಕೆಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.  

ಅವರು ಪಟ್ಟಣದ ಶ್ರೀನಗರ ಬಡಾವಣೆಯಲ್ಲಿನ ಶ್ರೀ ಸಿದ್ಧಾರೂಢ ಸೇವಾ ಸಮೀತಿ ಆಶ್ರಯದಲ್ಲಿ ಶುಕ್ರವಾರ ರಾಜ್ಯಸಭಾ ಸದಸ್ಯರ ತಮ್ಮ ಅನುದಾನದಲ್ಲಿ 5 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಸಿದ್ಧಾರೂಢ ಮಂದಿರದ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ದೇವಸ್ಥಾನಗಳ ಪಾತ್ರ ಹಿರಿದಾಗಿದೆ. ಮಂದಿರಗಳು ಧಾರ್ಮಿಕ ವಿಧಿ-ವಿಧಾನಗಳಿಂದ ಜನರಿಗೆ ಭಕ್ತಿ ಭಾವನೆಗಳನ್ನು ಮೂಡಿಸಲು ಪ್ರೇರಣೆಯಾಗಬೇಕೆಂದರು. 

ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಭಕ್ತಿ ಭಾವೈಕ್ಯತೆಯ ದ್ಯೋತಕವಾದ ಶ್ರೀ ಸಿದ್ಧಾರೂಢರು ನೆಲೆಯೂರಿದ ಕನ್ನಡ ನಾಡು ಸಮೃದ್ಧಿಯ ಬೀಡಾಗಿದ್ದು ಪಟ್ಟಣದಲ್ಲಿ ಮಂದಿರ ನಿರ್ಮಿಸಿ ಭಕ್ತರಿಗೆ ದರ್ಶನ ಭಾಗ್ಯ ನೀಡಲು ಸೇವಾ ಸಮಿತಿ ಪ್ರಯತ್ನ ಮಾಡುತ್ತಿದ್ದು ಅವರ  ಕಾರ್ಯಗಳಿಗೆ ನಮ್ಮ ಸಹಾಯ-ಸಹಕಾರ ಸದಾಕಾಲ ಇದೆ ಎಂದರು.  

ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಶ್ರೀ ಸಿದ್ಧಾರೂಢ ಸೇವಾ ಸಮಿತಿ ಅಧ್ಯಕ್ಷ ಆರ್‌.ಸಿ.ಗೌಡತಿ, ಉಪಾಧ್ಯಕ್ಷ ಎ.ಎಂ.ಸಿದ್ರಾಮನಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಜಿ.ಪಂ.ಮಾಜಿ ಸದಸ್ಯ ಬಸನಗೌಡಾ ಕೊಳದೂರ, ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಎಂ.ವಾಯ್‌.ಸೋಮಣ್ಣವರ, ನ್ಯಾಯವಾದಿಗಳಾದ ಎಫ್‌.ಎಸ್‌.ಸಿದ್ದನಗೌಡರ, ಮಂಜುನಾಥ ಸೋಮನ್ನವರ, ಬಿಜೆಪಿ ಮಂಡಳ ಅಧ್ಯಕ್ಷ ಗುರುಪಾದ ಕಳ್ಳಿ, ಆರ್‌.ವಾಯ್‌.ಸೋಮನ್ನವರ, ಪ್ರಗತಿಪರ ರೈತರಾದ ಉಳವಪ್ಪ ಕುಡಸೋಮನ್ನವರ, ಶ್ರೀಶೈಲ ಕೋಟಗಿ, ಆರ್‌.ಎನ್‌.ತಿರಕನ್ನವರ, ಶಿವಪ್ಪ ಮತ್ತಿಕೊಪ್ಪ, ಬಿ.ವಾಯ್‌.ಅಂಕಲಗಿ, ಶಿವಾನಂದ ಹತ್ತರಕಿ, ಮಡ್ಡೆಪ್ಪ ಗೂಳಣ್ಣವರ, ಬಿ.ಎಸ್‌.ಮಲಕಿನಕೊಪ್ಪ, ಎಚ್‌.ಬಿ.ಪರುನವರ ಮುಂತಾದವರು ಉಪಸ್ಥಿತರಿದ್ದರು. ಎಲ್‌ಐಸಿ ಪ್ರತಿನಿಧಿ ಎಸ್‌.ಎನ್‌.ಸುಂಕದ ಸ್ವಾಗತಿಸಿದರು.  

ಇದೇ ಸಂದರ್ಭದಲ್ಲಿ ಸಮುದಾಯ ಭವನಕ್ಕೆ ರೂ 5 ಲಕ್ಷ ಅನುದಾನ ನೀಡಿದ ಪ್ರಯುಕ್ತ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಅವರನ್ನು ಶ್ರೀ ಸಿದ್ಧಾರೂಢ ಸೇವಾ ಸಮಿತಿ ಸದಸ್ಯರು ಸನ್ಮಾನಿಸಿದರು.  

   

ಸುದ್ದಿ ಓದಿ