ನೂತನ ಇಂಜಿನಿಯರಿಂಗ್ ಕಾಲೇಜು ಕಟ್ಟಡಕ್ಕೆ ಜು.5ರಂದು ಶಂಕುಸ್ಥಾಪನೆ
ಹುಬ್ಬಳ್ಳಿ, ಜು.3: ಕಳೆದ ಐದು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನಗರದ ಪ್ರತಿಷ್ಠಿತ ವೇಮನ ವಿದ್ಯಾವರ್ಧಕ ಸಂಘಕ್ಕೆ ನೂತನ ಇಂಜಿನಿಯರಿಂಗ್ ಕಾಲೇಜು ಆರಂಭಿಸಲು ಅಗತ್ಯ ಅನುಮತಿ ದೊರೆತಿದ್ದು, ಕಾಲೇಜಿನ ನೂತನ ಕಟ್ಟಡದ ಶಂಕುಸ್ಥಾಪನೆ ಸಮಾರಂಭ ಜು.5ರಂದು ನಡೆಯಲಿದೆ. ವಿದ್ಯಾನಗರದ ಕೆ.ಎಚ್. ಪಾಟೀಲ ಕಾಲೇಜು ಆವರಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಸಮಾರಂಭದಲ್ಲಿ ವೇಮನ ವಿದ್ಯಾವರ್ಧಕ ಸಂಘದ ಮಹಾಪೋಷಕರು ಹಾಗೂ ಹಿರಿಯ ಧುರೀಣ ಎಚ್.ಕೆ. ಪಾಟೀಲ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಫ್ಯೂಚರ್ ಫೋರ್ಜ್ ಇಂಜಿನಿಯರಿಂಗ್ ಅಕಾಡೆಮಿ ಇದೇ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿದ್ದು, ನೂತನ ಕಾಲೇಜಿಗೆ ಅಗತ್ಯ ಅನುಮತಿಗಳನ್ನು ಸಂಘ ಪಡೆದುಕೊಂಡಿದೆ. ಕಾಲೇಜಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಸಿವಿಲ್ ಇಂಜಿನಿಯರಿಂಗ್ (ಅಗಿ), ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಗಳನ್ನು ಆರಂಭಿಸಲಾಗುತ್ತಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ನಿವೃತ್ತ ಸೂಪರಿಂಟೆಂಡೆಂಟ್ ಇಂಜಿನಿಯರ್ ರಮೇಶ್ ಜಂಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.