ಕಾಲುವೆ ಪಕ್ಕ ಹೆಣ್ಣು ಶಿಶು ಪತ್ತೆ
ತಾಳಿಕೋಟೆ20: ತಾಲೂಕಿನ ಬಳಗಾನೂರ ಗ್ರಾಮದ ಕಾಲುವೆ ಪಕ್ಕದಲ್ಲಿ 2 ರಿಂದ 3 ದಿನಗಳ ಅನಾಥ ಹೆಣ್ಣು ಶಿಶುವೊಂದು ಗುರವಾರ ಪತ್ತೆಯಾಗಿದ್ದು, ಗ್ರಾಮಸ್ಥರ ಸಹಕಾರದಿಂದ ಸದ್ಯ ಹೆಣ್ಣು ಶಿಶುವನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ತಾಳಿಕೋಟೆ-ವಿಜಯಪೂರ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬಳಗಾನೂರ ಗ್ರಾಮದ ಬಳಿ ಬರುವ ಮುಖ್ಯ ಕಾಲುವೆ ಬಳಿ ಜಂಇನದಲ್ಲಿ ಕೆಲಸ ಮಾಡುತ್ತಿದ್ದ ಶಿವಣ್ಣ ಗಂಗಣ್ಣ ಪಡಶೆಟ್ಟಿ ಅವರಿಗೆ ಮಗು ಅಳುವದನ್ನು ಕೇಳಿಸಿದೆ. ತಕ್ಷಣ ಮಗುವಿನ ಶಬ್ದ ಬಂದ ಕಡೆ ಧಾವಿಸಿದ ಶಿವಣ್ಣ ಬಿಸಿಲಿನಲ್ಲಿ ಚೀಲದಲ್ಲಿ ಹಾಕಿ ಬಿಟ್ಟೊಗಿರುವ ಹೆಣ್ಣು ಮಗುವನ್ನು ಕಂಡಿದ್ದಾರೆ. ಆತ ತಕ್ಷಣ ಬಳಗಾನೂರ ಗ್ರಾಮದಲ್ಲಿರುವ ಆತನ ಸ್ನೇಹಿತರಿಗೆ ವಿಷಯ ತಿಳಿಸಿದ್ದಾರೆ. ಸ್ನೇಹಿತರು ತಕ್ಷಣ ಗ್ರಾಮಕ್ಕೆ ಆಗಮಿಸಿದ್ದಾರೆ. ಸ್ನೇಹಿತರ ಸಹಾಯದೊಂದಿಗೆ ತಾಳಿಕೋಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ನಂತರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ವೈದ್ಯಾಧಿಕಾರಿ ಡಾ.ಎಸ್.ಬಿ.ಪಾಟೀಲ, ಮಕ್ಕಳ ತಜ್ಞ ಡಾ.ಆಯ್.ಬಿ.ತಳ್ಳೋಳ್ಳಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ.ಆಯ್.ಬಿ.ತಳ್ಳೋಳ್ಳಿ ವಿಜಯ ಕರ್ನಾಟಕದೊಂದೊಗೆ ಮಾತನಾಡಿ, ಮಗು ಜನನವಾಗಿ 3 ರಿಂದ 4 ದಿನ ಆಗಿದೆ. ಬಹುತೇಕ ಆಸ್ಪತ್ರೆಗಳಲ್ಲಿಯೇ ಜನನವಾಗಿದೆ. ಶಿಶು ಸದ್ಯಕ್ಕೆ ಆರೋಗ್ಯವಾಗಿದೆ. ಪಾಲಕರು ಪತ್ತೆಯಾದ ನಂತರ ಯಾಕೆ ಬಿಸಾಡಿದರು ಎಂದು ಗೊತ್ತಾಗಬೇಕು ಎಂದರು.