ಕಾರವಾರ

ದೇವೇಗೌಡರನ್ನು ಕೇಳಿ ರಾಜಕೀಯ ನಿರ್ಧಾರ ತೆಗೆದುಕೊಳ್ಳುವೆ - ಮಾಜಿ ಸಚಿವ ಆನಂದ ಆಸ್ನೋಟಿಕರ್

ದೇವೇಗೌಡರನ್ನು ಕೇಳಿ ರಾಜಕೀಯ ನಿರ್ಧಾರ ತೆಗೆದುಕೊಳ್ಳುವೆ - ಮಾಜಿ ಸಚಿವ ಆನಂದ ಆಸ್ನೋಟಿಕರ್

ಕಾರವಾರ 05: ನಾನು ತಕ್ಷಣಕ್ಕೆ ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ದೇವೇಗೌಡರ ಸಲಹೆ ಪಡೆದು ಅವರ ಮಾರ್ಗದರ್ಶನದಂತೆ ನಡೆದುಕೊಳ್ಳುವೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.

ಕಾರವಾರದಲ್ಲಿ ಸೋಮವಾರ  ಸುದ್ದಿಗೋಷ್ಠಿ ಮಾಡಿದ ಅವರು ಮಧು ಬಂಗಾರಪ್ಪ ಕಾಂಗ್ರೆಸ್‍ನತ್ತ ನಡೆದಿದ್ದಾರೆ. ಮಧು ನನ್ನ ಒಳ್ಳೆಯ ಗೆಳೆಯ. ನಾನು ತಕ್ಷಣಕ್ಕೆ ನಿರ್ಧಾರಕ್ಕೆ ಬರಲ್ಲ. ದೇವೇಗೌಡರ ಸಲಹೆ ಪಡೆಯುವೆ. ಕ್ಷೇತ್ರದ ಜನತೆಯ ಜೊತೆ ಚರ್ಚಿಸುವೆ ಎಂದರು. ಹಿಂದೂ ಮತ ಬ್ಯಾಂಕ್ ಬಲವಾಗಿದೆ. ಇಲ್ಲಿ ಉಳಿದ ವಿಷಯಗಳು ಗೌಣ. ಕೆಲಸ ಮಾಡಲಿ ಬಿಡಲಿ, ಉದ್ಯೋಗ ಸಮಸ್ಯೆ, ಬಡತನ ಯಾವುದೂ ಲೆಕ್ಕಕ್ಕಿಲ್ಲ. ಹಿಂದೂ ಕಾರ್ಡ ಮುಂದಿಟ್ಟುಕೊಂಡು ರಾಜಕೀಯ ಮಾಡಬಹುದು ಎಂಬುದು ಈಚಿನ ವರ್ಷಗಳಲ್ಲಿ ಸಾಬೀತಾಗಿದೆ. ಅಂತ ಒಂದು ಸುವರ್ಣ ಅವಕಾಶ ನಮಗೂ ಬರಬಹುದು, ಕಾಯೋಣ ಎಂದರು. 

ಸಂಸದ ಅನಂತಕುಮಾರ ಅನಾರೋಗ್ಯಕ್ಕೆ ಒಳಗಾಗಿದ್ದು ಬಿಜೆಪಿ ಯಲ್ಲಿ ಚಾನ್ಸ್ ಸಿಗತ್ತೆ ಅಂದುಕೊಂಡಿದ್ದೆ. ಆದರೆ  ಅನಂತಕುಮಾರ ಹೆಗಡೆ ಮತ್ತೆ ಗಟ್ಟಿ ಆಗಿದ್ದಾರೆ, ಮೊನ್ನೆ ಯಾವುದೋ ಜಾತ್ರೆಯಲ್ಲಿ ನೋಡಿದೆ. ಜನರಿಗೆ ಮುಖ ತೋರಿಸಲಿ , ಬಿಡಲಿ, ಜನ ಹೇಗೂ ಮತ ಹಾಕ್ತಾರೆ, ಹಿಂದೂ ಒಬ್ಬನ ಸಾವು ಆದರೆ ಸಾಕು. ಅದೇ ಮತಬ್ಯಾಂಕ್ ಆಗಿ ಬದಲಾಗುತ್ತದೆ. ಜನರ ಕೆಲಸ ಮಾಡದೆಯೂ ರಾಜಕಾರಣ ನಡೆದುಹೋಗುತ್ತದೆ ಎಂದು ವಿಷಾದಿಸಿದರು. 

ಸಂಸದ  ಅನಂತಕುಮಾರ್ ಹೆಗಡೆ ಅನಾರೋಗ್ಯಕ್ಕೆ ಒಳಗಾಗಿದಕ್ಕೆ ತನ್ನ ಸ್ನೇಹಿತರು ಬಿಜೆಪಿ ಹೋಗಿ ಎಂದು ಸಲಹೆ ನೀಡಿದ್ರು. ಈಗ ಹೆಗಡೆ ಗಟ್ಟಿ ಆಗಿದ್ದಾನೆ. ಮುಂದೆ ಚುನಾವಣೆಯ ಹೊತ್ತಿಗೆ  ಯಾವುದಾದರೂ ಒಂದು ಅಲೆಯಲ್ಲಿ ಗೆಲುವು ಸಾಧಿಸುತ್ತಾನೆ ಎಂದು  ಅಸ್ನೋಟಿಕರ್ ಹೇಳಿದರು.  ಅನಂತಕುಮಾರ್  ಹೆಗಡೆ ಇದ್ದರೆಷ್ಟು, ಹೋದರೆಷ್ಟು..? ಆತ ಸಂಸದನಾಗಿ ಆರೋಗ್ಯದಿಂದ  ಇದ್ದರೂ, ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲ್ಲ. ಅನಾರೋಗ್ಯಕ್ಕೆ ಒಳಗಾದ್ರೆ ಏನು ನಷ್ಟ ಇಲ್ಲ. ಕೋಮು ಗಲಭೆ ಆದಾಗ  ಮಾತ್ರ ಕ್ಷೇತ್ರದಲ್ಲಿ ಬಂದು ಬೆಂಕಿ ಹಚ್ಚಿಸುವ ಸಂಸದನ ಬಗ್ಗೆ ಕರುಣೆ ಇಲ್ಲ ಎಂದು ಅಸ್ನೋಟಿಕರ್ ಟೀಕಿಸಿದರು.

ಕ್ರಿಕೆಟ್ ಸ್ಟೇಡಿಯಂ: ಕ್ರಿಕೆಟ್ ಸ್ಟೇಡಿಯಂ ಸಾವರ ಪೈಯಲ್ಲಿ ನಿರ್ಮಿಸಿದರೆ, 200 ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಮಾಜಿ ಶಾಸಕರು ಜನರ ದಾರಿ ತಪ್ಪಿಸಬಾರದು. ಕ್ರಿಕೆಟ್ ವರ್ಷದಲ್ಲಿ  ಎಷ್ಟು ಅಂತರಾಷ್ಟ್ರೀಯ ಪಂದ್ಯಗಳು ನಡೆಯಬಹುದು? ಎರಡು ಮೂರು ಪಂದ್ಯಗಳಿಂದ 200 ಉದ್ಯೋಗ ಸಾಧ್ಯವೇ? ಗುಡ್ಡ ನಾಶ ಮಾಡುವುದು ನಿಸರ್ಗದ ದೃಷ್ಟಿಯಿಂದ ಅಷ್ಟು ಸರಿಯಾದ ಕ್ರಮವಲ್ಲ ಎಂದು ಮಾಜಿ ಸಚಿವ ಅಸ್ನೋಟಿಕರ್ ಅಭಿಪ್ರಾಯಪಟ್ಟರು.

ಸುದ್ದಿ ಓದಿ