ತಾಳಿಕೋಟಿ

ನಮಗೆ ತೊಂದರೆ ಕೊಟ್ಟವರನ್ನೂ ಕ್ಷಮಿಸಿ ಮುನ್ನಡೆಯಬೇಕು: ಸಿದ್ಧಲಿಂಗದೇವರು

ನಮಗೆ ತೊಂದರೆ ಕೊಟ್ಟವರನ್ನೂ ಕ್ಷಮಿಸಿ ಮುನ್ನಡೆಯಬೇಕು: ಸಿದ್ಧಲಿಂಗದೇವರು

ತಾಳಿಕೋಟೆ: ಭೂಮಿಯಲ್ಲಿ ಯಾರು ಶ್ರೇಷ್ಠರು ಎಂದು ಪ್ರಶ್ನೆ ಮಾಡಿಕೊಂಡರೆ ನಾವು ಬರುವ ಮುಂಚೆ ಇರುವ ಭೂಮಿ ಶ್ರೇಷ್ಠವಾದುದು ಎಂದು ಖಾಸ್ಗತೇಶ್ವರಮಠದ ಸಿದ್ಧಲಿಂಗದೇವರು ಹೇಳಿದರು. 

ಪಟ್ಟಣದ ಸಾಂಭಪ್ರಭು ಶರಣಮುತ್ಯಾರವರ ಜಾತ್ರಾ ಮಹೋತ್ಸವದಂಗವಾಗಿ ಶ್ರೀ ಸಾಂಭಪ್ರಭು ಶರಣಮುತ್ಯಾರವರ ದೇವಸ್ಥಾನದ ಆವರಣದಲ್ಲಿ ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮ ತಾಯಿ ಪುರಾಣ ಪ್ರಾರಂಭೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. 

ನಾವು ಭೂಮಿಗೆ ಎಷ್ಟು ಅನ್ಯಾಯ ಮಾಡಿದರೂ ಶೋಷಿಸಿದರೂ ಅದು ವಿರೋಧ  ಮಾಡದೆ ಸಹಿಸುತ್ತದೆ. ಮತ್ತೆ ನಮಗೆ ಎಲ್ಲ ರೀತಿಯಿಂದಲೂ ಬದುಕಲು ಅನುವಾಗಿದೆ ಆದ್ದರಿಂದ ಭೂಮಿಶ್ರೇಷ್ಠವಾದುದು ಹಾಗೇ ನಾವು ಮನುಷ್ಯರು ನಮಗೆ ತೊಂದರೆ ಕೊಟ್ಟವರನ್ನೂ ಕ್ಷಮಿಸಿ ಮುನ್ನಡೆಯಬೇಕಿದೆ ಎಂದರು. 

 ಸಮ್ಮುಖವನ್ನು ವಹಿಸಿದ್ದ ಸ್ಥಳೀಯ ಕೈಲಾಸಪೇಟೆಯ ಬಸವಪ್ರಭು ದೇವರು ಮಾತನಾಡಿ, ಪುರಾಣ, ಪುಣ್ಯಕಥೆಗಳು ಸತ್ಸಂಗಳು ನಮ್ಮ ಬದುಕನ್ನು ಬದಲಿಸುತ್ತವೆ. ಸನ್ಮಾರ್ಗದಲ್ಲಿ ಕರೆದೊಯ್ಯುತ್ತವೆ. ಮುಕ್ತಿಯ ದಾರಿಯನ್ನು ಸುಲಭ ಮಾಡುತ್ತವೆ ಎಂದರು. ರಾಗದ್ವೇಷ ಅಳಿದವರ ಬಗ್ಗೆ ಪುರಾಣಗಳಿರುತ್ತವೆ. ಹೇಮರಡ್ಡಿ ಮಲ್ಲಮ್ಮ ಸಂಸಾದಲ್ಲಿದ್ದರೂ ಸಂಸಾರಕ್ಕಂಟಿಕೊಳ್ಳದಂತೆ ಹುಚ್ಚಪತಿಯಲ್ಲಿಯೇ ತನ್ನ ಆರಾದ್ಯ ದೈವ ಮಲ್ಲಯ್ಯನನ್ನು ಕಂಡಳು. ಇದ್ದುದನ್ನು ಉಪೇಕ್ಷಿಸಲಿಲ್ಲ. ಹೊಸದನ್ನು ಅಪೇಕ್ಷಿಸಲಿಲ್ಲ. ಅದಕ್ಕೆ ಅವರ ಪುರಾಣ ಕಥೆ ಕೇಳಿಸಿಕೊಳ್ಳಬೇಕು. ಅವರಂತೆ ನಡೆಯಬೇಕೆಂದರು. ನೇತೃತ್ವವನ್ನು ಸಾಂಭಪ್ರಭು ಶರಣರಮಠದ ಬಸಣ್ಣನವರು ಶರಣರು ಹಾಗೂ ಶರಣಪ್ಪನವರು ಶರಣರು ವಹಿಸಿದ್ದರು. 

ಶರಣಸೋಮನಾಳದ ಮಹಾದೇವಶಾಸ್ತ್ರಿಗಳು, ಹುಣಸಗಿಯ ಡಾ.ಗುರುರಾಜ ಹುಲಕಲ್ಲ ಮಾತನಾಡಿದರು. ನೇತೃತ್ವವನ್ನು ಸಾಂಭಪ್ರಭು ಶರಣರಮಠದ ಬಸಣ್ಣನವರು ಶರಣರು ಹಾಗೂ ಶರಣಪ್ಪನವರು ಶರಣರು ವಹಿಸಿದ್ದರು. ಸಂಗೀತಸೇವೆಯನ್ನು ಗೊರವಗುಂಡಗಿಯ ಕಲ್ಯಾಣಕುಮಾರ ಗವಾಯಿ ಹಾಗೂ ತಬಲಾ ಸೇವೆಯನ್ನು ಮೋರಟಗಿಯ ರವಿಕುಮಾರ ವಿಭೂತಿ ನೀಡಿದರು. ವಿಜಯಪುರ  ಮಹಿಳಾ ವಿಶ್ವವಿದ್ಯಾಲಯದ ವಿಜಯಕುಮಾರ ಹಿರೇಮಠ ನಿರೂಪಿಸಿದರು. ಶರಣಗೌಡ ಪೊಲೀಸ್ ಪಾಟೀಲ ಸ್ವಾಗತಿಸಿದರು. 


ಸುದ್ದಿ ಓದಿ