ಶಾಸಕ ಸೋಮನಗೌಡರು ಅಭಿವೃದ್ಧಿಯ ಹರಿಕಾರ: ಬಿರಾದಾರ
ತಾಳಿಕೋಟಿ: ಶಾಸಕ ಸೋಮನಗೌಡ ಪಾಟೀಲರು ಶಾಸಕರಾಗಿ ಬರುವ ಮೊದಲು ದೇ.ಹಿಪ್ಪರಗಿ ಮತಕ್ಷೇತ್ರ ಅಭಿವೃದ್ಧಿಯಲ್ಲಿ ಜಿಲ್ಲೆಯಲ್ಲಿಯೇ ಹಿಂದುಳಿದ ಕ್ಷೇತ್ರವಾಗಿತ್ತು ಆದರೆ ಅವರು ಶಾಸಕರಾಗಿ ಆಯ್ಕೆಯಾಗಿ ಬಂದನಂತರ ಕೇವಲ ನಾಲ್ಕು ವರ್ಷಗಳಲ್ಲಿ ಈ ಕ್ಷೇತ್ರ ಇಂದು ಜಿಲ್ಲೆಯ ಒಂದು ಮಾದರಿ ಕ್ಷೇತ್ರವಾಗಿದೆ ಎಂದು ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ ಹೇಳಿದರು.
ಮತಕ್ಷೇತ್ರದ ಮುಳಸಾವಳಗಿ ಗ್ರಾಮದಲ್ಲಿ ರೂ. 5 ಕೋಟಿ ಮೊತ್ತದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಆಗಮಿಸಿದ ಸಂದರ್ಭದಲ್ಲಿ ಹಮ್ಮಿಕೊಂಡ ಸನ್ಮಾನ ಹಾಗೂ ಅಭಿನಂದನಾ ಸಭೆಯಲ್ಲಿ ಶಾಸಕ ಸೋಮನಗೌಡರನ್ನು ಗ್ರಾಮಸ್ಥರ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.
ಶಾಸಕ ಸೋಮನಗೌಡರು ನುಡಿದಂತೆ ನಡೆಯುವ ವ್ಯಕ್ತಿ ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರದ 120 ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳನ್ನು ಕೊಟ್ಟಿದ್ದಾರೆ. ವಿಶೇಷವಾಗಿ ನಮ್ಮ ರೈತರಿಗೆ ಆರ್ಥಿಕವಾಗಿ ಸಬಲೀಕರಿಸಲು ನೀರಾವರಿ ಯೋಜನೆಗಳನ್ನು ತಂದಿದ್ದಾರೆ. ಅವರೊಬ್ಬ ಅಭಿವೃದ್ಧಿಯ ಹರಿಕಾರರಾಗಿದ್ದು ಮತ್ತೇ ನಾವೆಲ್ಲರೂ ಸೇರಿ ಅವರನ್ನು ಆಯ್ಕೆ ಮಾಡಬೇಕಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಸೋಮನಗೌಡರು ಅಭಿವೃದ್ಧಿ ವಿಷಯದಲ್ಲಿ ನಾನೆಂದೂ ರಾಜಕಾರಣ ಮಾಡಿಲ್ಲ ಜಾತಿ ರಾಜಕಾರಣದಲ್ಲೂ ನನಗೆ ನಂಬಿಕೆ ಇಲ್ಲ. ಕ್ಷೇತ್ರದ ಜನರ ಅಭಿವೃದ್ಧಿಯೇ ನನಗೆ ಮುಖ್ಯ ನೀವು ನನ್ನ ಮೇಲೆ ವಿಶ್ವಾಸವಿರಿಸಿ ಶಾಸಕನಾಗಿ ಮಾಡಿದ್ದೀರಿ ನಿಮ್ಮ ಋಣ ತೀರಿಸುವುದು ನನ್ನ ಕರ್ತವ್ಯವಾಗಿದೆ. ನಿಮ್ಮ ಪ್ರೀತಿ ಹಾಗೂ ವಿಶ್ವಾಸ ಮುಂದೆಯೂ ನನ್ನ ಮೇಲೆ ಹೀಗೆಯೇ ಇರಲಿ ಎಂದರು.
ಈ ಸಮಯದಲ್ಲಿ ಬಿಜೆಪಿ ಮಂಡಲ ಪ್ರ.ಕಾರ್ಯದರ್ಶಿ ಭೀಮನಗೌಡ ಲಚ್ಯಾಣ, ಮುಖಂಡರುಗಳಾದ ಮಹಾಂತೇಶ ಬಿರಾದಾರ, ತಳವಾರ, ಸುರೇಶ ಚವ್ಹಾಣ, ಗ್ರಾಪಂ ಸದಸ್ಯ ದಯಾನಂದ ರಾಠೋಡ, ಗುತ್ತಿಗೆದಾರ ಪ್ರಕಾಶ ಆಲೂರ, ಎ.ಇ. ಅಯ್ಯನಗೌಡ ತುಂಬಗಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.