ತಾಳಿಕೋಟಿ

ಡಾ. ಬಾಬು ಜಗಜೀವನರಾಮ್ ಆದರ್ಶ ಪಾಲಿಸಿ: ತಹಶೀಲ್ದಾರ ಢವಳಗಿ

ಡಾ. ಬಾಬು ಜಗಜೀವನರಾಮ್ ಆದರ್ಶ ಪಾಲಿಸಿ: ತಹಶೀಲ್ದಾರ ಢವಳಗಿ


ತಾಳಿಕೋಟಿ 05: ಮಾಹಾನವ್ಯಕ್ತಿಗಳ ಜಯಂತಿಗಳನ್ನು ಆಚರಿಸಿದರೆ ಸಾಲದು ಅವರು ಮನುಕುಲಕ್ಕೆ ನೀಡಿದ ಉದಾತ್ತ ಚಿಂತನೆ ಹಾಗೂ ಅವರು ತೋರಿಸಿದ ಮಾರ್ಗವನ್ನು ಅನುಸರಿಸಿದಾಗ ಮಾತ್ರ ಸಮಾಜ ಪರಿವರ್ತನೆ ಸಾಧ್ಯ ಎಂದು ತಾಳಿಕೋಟಿ ತಹಶೀಲ್ದಾರ ಅನೀಲಕುಮಾರ ಢವಳಗಿ ತಿಳಿಸಿದರು. 

ಮಂಗಳವಾರ ಪಟ್ಟಣದ ಡಾ. ಬಿ. ಆರ್‌. ಅಂಬೇಡ್ಕರ ಭವನದಲ್ಲಿ ತಾಲೂಕ ಆಡಳಿತ, ತಾಲೂಕಾ ಪಂಚಾಯತ ಸಮಾಜಕಲ್ಯಾಣ ಇಲಾಖೆ ಮುದ್ದೇಬಿಹಾಳ ಹಾಗೂ ಪುರಸಭೆ ತಾಳಿಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ದಿ. ಡಾ.ಬಾಬು ಜಗಜೀವನರಾಮ್‌ರವರ 115ನೇ ಜಯಂತ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಮಾಜಿ ಉಪ ಪ್ರಧಾನಿ ದಿ. ಡಾ. ಬಾಬುಜಗಜೀವನರಾಮ್ ಅವರು ದೇಶದ ರಾಜಕೀಯ ಹಾಗೂ ಸಾಮಜೀಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಶೋಷಿತ ಸಮುದಾಯಗಳ ಉದ್ಧಾರ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಅವರು ಬಲವಾಗಿ ನಂಬಿದ್ದರು ಇಂದು ಈ ಸಮಾಜವು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡುವ ಅಗತ್ಯ ಇದೆ, ಸರಕಾರದ ಯೋಜನೆಗಳು ಸಮಾಜಕ್ಕೆ ತಲುಪಿಸುವಂಥಹ ಕಾರ್ಯ ಆಗಬೇಕಾಗಿದೆ ಎಂದರು.ವಿಜಯಪೂರ ಸರಕಾರಿ ಪ್ರಥಮ ದರ್ಜೆ ಕಾಲೇಜ ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಕಾಂತ ಬಿ ಮಾತನಾಡುತ್ತಾ ಡಾ. ಬಾಬು ಜಗಜೀವನರಾಮ್ ಅವರು ಸಮಾಜದಲ್ಲಿರುವ ಅಸ್ಪೃಶ್ಯತೆ ಹಾಗೂ ಅಸಮಾನತೇಯ ವಿರುದ್ಧ ಹೋರಾಡಿದರು. ತಮಗೆ ದೊರೆತ ರಾಜಕೀಯ ಸ್ಥಾನಮಾನಗಳನ್ನು ಶೋಷಿತರ ಏಳಿಗೆಗಾಗಿ ಪ್ರಾಮಾಣಿಕವಾಗಿ ಬಳಸಿದರು ಇಡೀ ಬದುಕನ್ನೆ ದೇಶ ಹಾಗೂ ಶೋಷಿತರ ಸೇವೆಗಾಗಿ ಮುಡಿಪಾಗಿಟ್ಟರು. ಕಾರ್ಮಿಕ ಸಚಿವನಾಗಿ ರಕ್ಷಣಾ ಹಾಗೂ ಕೃಷಿ ಮಂತ್ರಿಯಾಗಿ ಕ್ರಾಂತಿಕಾರಕ ರೀತಿಯಲ್ಲಿ ಕೆಲಸ ಮಾಡಿದರು. ದೇಶದ ಪ್ರಧಾನಿಯಾಗುವ ಎಲ್ಲ ಅರ್ಹತೆಗಳಿದ್ದರು ಜಾತಿ ವ್ಯವಸ್ಥೆಯಿಂದಾಗಿ ಉಪ ಪ್ರಧಾನಿಯಾದರು ಇಂದು ಶೋಶಿತರು ಸಾಮಾಜಿಕವಾಗಿ ಸಂಘಟಿತರಾಗುವ ಅಗತ್ಯ ಇದೆ ಎಂದು ತಿಳಿಸಿದರು.  

ಕರವೆ ಜಿಲ್ಲಾ ಉಪಾಧ್ಯಕ್ಷ ಜೈ ಭೀಮ ಮುತ್ತಗಿ ಮಾತನಾಡಿ ಕೆಲವು ಸ್ವಾರ್ಥಿಗಳು ನಮ್ಮನ್ನು ಎಡ-ಬಲವೆಂದು ವಿಂಗಡಿಸಿ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇವರ ಕುರಿತು ನಾವು ಜಾಗೃತರಾಗಬೇಕಾಗಿದೆ ಕೇವಲ ಶೇ.2ಸಮುದಾಯ ದೇಶವನ್ನಾಳುತ್ತಿದೆ. ನಾವು ಶೇ.22 ಇದ್ದರೂ ನಮ್ಮ ಕೈಯಲ್ಲಿ ಅಧಿಕಾರ ಇಲ್ಲ ಕಾರಣ ನಾವು ಸಂಘಟಿತರಾಗಿಲ್ಲ ನಮ್ಮ ನೈಜ ಶತ್ರುಗಳು ಯಾರು ವೆಂಬುದನ್ನು ಗುರುತಿಸುವ ಅಗತ್ಯ ಇದೆ ಡಾ.ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಕನಸು ನನಸಾಗಿಸುವಲ್ಲಿ ನಾವು ಶಕ್ತಿಮೀರಿ ಪ್ರಯತ್ನಿಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು. 

ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸನಗೌಡ ಬಿರಾದಾರ, ದಲಿತ ಮುಖಂಡರಾದ ಸಿದ್ದು ಬಾರಿಗಿಡದ ಹಾಗೂ ದೇವೆಂದ್ರ ಹಾದಿಮನಿ, ಸಮಯೋಚಿತವಾಗಿ ಮಾತನಾಡಿದರು. 

   ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ನಿವೃತ್ತ ಎಸ್‌.ಪಿ. ಎಸ್ ಬಿ ಕಟ್ಟಿಮನಿ, ದಲಿತ ಮುಖಂಡ ಮುತ್ತಣ್ಣ ಚಮಲಾಪೂರ, ಪಿ.ಎಸ್‌.ಐ ವಿನೋದ ದೊಡಮನಿ, ಮುಖಂಡ ಶಿವಶಂಕರ ವಿಜಯಪೂರ ಇರಗಪ್ಪಣ್ಣ ಸಹಾಯಕ ನಿರ್ದೇಶಕ ಉಮೇಶ ಲಾಮಣಿ, , ಪುರಸಭೆ ಸದಸ್ಯರಾದ ಮುದುಕಣ್ಣ ಬಡಿಗೇರ, ಹಿರೇಮಠ ಶರಣಗೌಡ ಗೊಟಖಂಡ್ಕಿ, ಸುಭಾಶ ಗುಂಡಕನಾಳ, ನಾಗೇಶ ಕಟ್ಟಿಮನಿ ಗುರು ಪ್ರಸಾದ ಗೊಟಖಂಡ್ಕಿ ಮಹೇಶ ಛಲವಾದಿ, ನೀಲಮ್ಮ ಪಾಟೀಲ, ಆಹಾರ ನೀರೀಕ್ಷಕಿ ಆರ್‌.ಎ. ಖಾದೀಮ, ಕೃಷಿ ಅಧಿಕಾರಿಗಳಾದ ಮಹೆಬೂಬ ಬೀಳಗಿ, ಮಹೇಶ ಜೋಷಿ, ಸಮಾಜಕಲ್ಯಾಣ ಇಲಾಖೆಯ ಎನ್‌.ವಿ. ಕೋರಿ, ಎಸ್ ಎಂ. ಕಲಬುರ್ಗಿ, ಎಸ್ ಎಂ. ಬಾಸಗಿ ಸೋಮು ಹಗರಗುಂಡ, ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ