ಪ್ರವಾದಿ ಮಹಮ್ಮದರ ಆದರ್ಶ ಪಾಲಿಸಿ: ಸಿದ್ಧಲಿಂಗ ಶ್ರೀಗಳು
ತಾಳಿಕೋಟಿ: ಮನುಷ್ಯನ ಆಯುಷ್ಯ ಅಲ್ಪವಾಗಿದೆ, ಮರಣ ಯಾವಾಗ ಬರುತ್ತದೆ ಎಂಬುವುದು ನಮಗ್ಯಾರಿಗೂ ಗೊತ್ತಿಲ್ಲ. ಭೂಮಿಯ ಮೇಲೆ ಇದ್ದಷ್ಟು ದಿವಸ ಹೇಗೆ ಬದುಕಬೇಕೆಂಬುವುದನ್ನು ತಿಳಿದು ಬದುಕಬೇಕಾಗಿದೆ. ಬದುಕಿನ ಉದ್ದೇಶವನ್ನು ಪೈಗಂಬರರು ಹಾಗೂ ಶರಣರು ತಿಳಿಸಿ ಕೊಟ್ಟು ಹೊಗಿದ್ದಾರೆ. ಆದ್ದರಿಂದ ಅವರ ಬದುಕಿನ ಆದರ್ಶಗಳನ್ನು ಅನುಸರಿಸುವ ಅಗತ್ಯ ಇಂದು ನಮಗೆಲ್ಲರಿಗೂ ಇದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ಧಲಿಂಗ ದೆವರು ತಿಳಿಸಿದರು.
ಭಾನುವಾರ ಪಟ್ಟಣದ ಟಿಪ್ಪು ನಗರದಲ್ಲಿ ಈದ-ಮಿಲಾದ್ ಅಂಗವಾಗಿ ಮಿಲಾದ್ ಕಮಿಟಿಯ ವತಿಯಿಂದ ಹಮ್ಮಿಕೊಂಡ ಸೌಹಾರ್ಧ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಜೆಡಿಎಸ್ ಮುಖಂಡ ಡಾ. ಸಿ. ಎಸ್. ಸೋಲಾಪೂರ ಅವರು ಮಾತನಾಡಿ ಜಗತ್ತಿನ ಎಲ್ಲ ಧರ್ಮಗಳು ಶಾಂತಿ ಮತ್ತು ಸಹಬಾಳ್ವೆಯನ್ನೇ ಭೋಧಿಸಿವೆ. ಇದನ್ನು ನಾವು ಸರಿಯಾಗಿ ತಿಳಿಯದೆ ಇರುವುದರಿಂದ ಸಮಾಜದಲ್ಲಿಂದು ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದೆ. ನಾವೇಲ್ಲರು ನಮ್ಮ ನಮ್ಮ ಧರ್ಮಗಳನ್ನು ಪ್ರೀತಿಸುವದರ ಜೋತೆಗೆ ಅನ್ಯ ಧರ್ಮಗಳನ್ನು ಗೌರವಿಸುವಂತವರಾಗಬೇಕು ಎಂದು ಹೇಳಿದರು.
ಅಂಜುಮನ್ ಶಿಕ್ಷಣ ಸಂಸ್ಥೆಯ ಚೇರಮನ್ನರಾದ ಅಬ್ದುಲ್ರಜಾಕ ಮನಗೂಳಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಮ್ಮದ್ ಪ್ರವಾದಿಗಳು ಜಗತ್ತಿಗೆ ಶಾಂತಿ ಹಾಗೂ ಪ್ರೀತಿಯ ಸಂದೇಶವನ್ನು ಕೊಟ್ಟಿದ್ದಾರೆ. ಮುಸ್ಲೀಂರು ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಸ್ಥಾಪಿಸಲು ನಿರಂತರವಾಗಿ ಪ್ರಯತ್ನಿಸಬೇಕು ಎಂದರು.
ಈ ಸಂದರ್ಭದಲ್ಲಿ ಗಣ್ಯರಾದ ಶರಣಗೌಡ ಪಾಟೀಲ, ಬಾಬು ಬಡಗಣ, ರಾಜಅಹ್ಮದ ಒಂಟಿ, ಸಿಕಂದರ ವಠಾರ, ಹಸನಸಾಬ ಕೋರ್ಕಿ, ಅಶೋಕಗೌಡ ಪಾಟೀಲ, ಮಹಿಬೂಬ ಕೆಂಭಾವಿ, ಇಮಾಮ್ಸಾಬ ಕಾಳಗಿ, ಮಹಿಬೂಬ ರಂಗಮಪೇಟ, ಖಾಜಾಹುಸೇನ ಬಿಳವಾರ, ಮಹಿಬೂಬಸಾಬ ಹಡಗಲೇರಿ, ಮಶಾಕ ಕುಂಟೋಜಿ, ರಿಯಾಜ್ ಪಟ್ಟೇವಾಲೆ, ಹುಸೇನ ಲಾಹೋರಿ, ಮೌಲಾ ಬಿದರಿ ಉಪಸ್ಥಿತರಿದ್ದರು.
ಸಿಹಿ ವಿತರಣೆ: ಇದೇ ಸಂದರ್ಭದಲ್ಲಿ ಈದ-ಮಿಲಾದ್ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಿದ್ಧಲಿಂಗ ಶ್ರೀಗಳು ಇದಕ್ಕೆ ಚಾಲನೆ ನೀಡಿದರು.