ಜನಪದ ಹಾಡುಗಳು ಗ್ರಾಮೀಣ ಮಹಿಳೆಯರ ಅಭಿವ್ಯಕ್ತಿಯ ಘನತೆಯ ಪ್ರತೀಕಗಳು: ಡಾ.ವೀರೇಶ ಬಡಿಗೇರ
ಹಂಪಿ 31: ಜನಪದ ಹಾಡು, ಕಥೆ, ಒಗಟು, ಒಡುಪು, ಗಾದೆಗಳು, ಗ್ರಾಮೀಣ ಮಹಿಳೆಯರ ಜೀವನಾನುಭಾವದ ಅಭಿವ್ಯಕ್ತಿಯ ಘನತೆಯನ್ನು ಎತ್ತರಿಸಿದ ಪ್ರಕಾರಗಳಾಗಿವೆ. ಬದುಕಿನ ಹಲವು ಸಂಕೀರ್ಣತೆಯನ್ನು ಎದುರಿಸುತ್ತಲೇ ಹಾಡುವ ಮತ್ತು ಆಡುವ ಸ್ವಾತಂತ್ರ್ಯವನ್ನು ಸಂದರ್ಭದ ಅಗತ್ಯಕ್ಕೆ ತಾನೇ ಸೃಷ್ಟಿಸಿಕೊಳ್ಳುವ ಮೂಲಕ ಬದುಕಿನ ಒತ್ತಡಗಳನ್ನು ನಿಭಾಯಿಸಲು ಕಲಿತಿದ್ದಾಳೆ. ತನ್ನ ಧ್ವನಿಗೆ ತಾನೇ ಒಂದು ಸಾಮಾಜಿಕ ಗೌರವವನ್ನು ಸ್ಥಾಪಿಸಿಕೊಂಡಿದ್ದಾಳೆ.
ಪುರುಷನಿಷ್ಟ ಅಹಂಕಾರಗಳಲ್ಲಿ ಕಳೆದುಹೋಗಬಹುದಾಗಿದ್ದ ತನ್ನಂತ ಹಲವು ಮಹಿಳೆಯರ ಅಂತರಂಗದ ಧ್ವನಿಗೆ ಸತ್ವಯುತ ಶಕ್ತಿ ತುಂಬಿದವಳಾಗಿದ್ದಾಳೆ. ಎಂದು ದಿನಾಂಕ 30.8.2024ರಂದು ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗವು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ-2ರ ಅಧ್ಯಕ್ಷತೆ ವಹಿಸಿ ಡಾ.ವೀರೇಶ ಬಡಿಗೇರ ಅವರು ಮಾತನಾಡಿದರು.
2024-2025ನೇ ಶೈಕ್ಷಣಿಕ ಸಾಲಿನ ವಿಶೇಷ ಉಪನ್ಯಾಸ-2ರ ಜನಪದ ಸಾಹಿತ್ಯ ಸಂಸ್ಕೃತಿ ಹಾಗೂ ಗಾಯನ ಪ್ರಾತ್ಯಕ್ಷಿಕೆ ಕುರಿತು ಉಪನ್ಯಾಸ ಮಾಡಿದ ಡಾ. ಅರ್ಜುನ ಗೊಳಸಂಗಿ ಅವರು ಜನಪದ ಸಾಹಿತ್ಯ ಕ್ರಿಯಾಮೂಲವಾದದ್ದು. ಕ್ರಿಯೆ ಇಲ್ಲದಿದ್ದರೆ ಅದಕ್ಕೆ ಜಾಗವಿಲ್ಲ ಜನಪದ ಹಾಡು, ಕತೆ, ಗಾದೆ, ಒಡಪು, ಹಂತಿಪದ, ಇವೆಲ್ಲವೂ ಕ್ರಿಯಾಶೀಲ ಸಮಾಜದ ಜೀವಂತ ಅಭಿವ್ಯಕ್ತಿಗಳು. ಇಂದು ಜನಪ್ರಿಯ ಹಾಡುಗಳು ಅತಿಯಾಗಿ ಹುಟ್ಟುತ್ತಿವೆ.
ಅವು ನಿಜವಾದ ಜನಪದ ಹಾಡುಗಳಲ್ಲ. ತುತ್ತ ತಪ್ಪಿದರ ತೂಕ ತಪ್ಪತೈತಿ’ ಎನ್ನುವ ಜನಪದರ ಮಾತು ಬಹಳ ಅರ್ಥಪೂರ್ಣವಾದದ್ದು. ತುತ್ತು ನಮ್ಮ ದೇಹ ಕ್ರಿಯೆಗಳಿಗೆ ಸತ್ವವನ್ನು ಒದಗಿಸಿದಂತೆ ಆಪತ್ತನ್ನು ಒದಗಿಸುತ್ತದೆ. ಸಮತೋಲನ ಆಹಾರ ದೇಹಾರೋಗ್ಯಕ್ಕೆ ಕಾರಣವಾದಂತೆ ಆರೋಗ್ಯಯುತ ಸಮಾಜಕ್ಕೂ ಕಾಣವಾಗುತ್ತದೆ. ಸುಸಂಸ್ಕೃತ ನಡೆ, ನುಡಿಗಳು ಬದುಕಿನ ಸೂತ್ರಗಳಾಗಬೇಕು. ಇಂದು ವಿಕೃತಿಯೇ ಎಲ್ಲ ಕಡೆ ರಾರಾಜಿಸುತ್ತಿದೆ. ಇಂತಹ ಹೊತ್ತಲ್ಲಿ ವಿದ್ಯಾರ್ಥಿಗಳಾದ ನೀವು ಜನಪದ ಸಂಸ್ಕೃತಿ ಸಂಭ್ರಮಗಳನ್ನು ಮೈಗೂಡಿಸಿಕೊಂಡ ಸೃಜನಶೀಲ ಹಾಗೂ ಪ್ರಜ್ಞಾವಂತ ನಾಗರಿಕರಾಗಬೇಕು, ಬಿರುಕಿಲ್ಲದ ಬಾಳು ಬದುಕಬೇಕೆಂದು ಹೇಳಿದರು.