ಜನಪದ ಸಾಹಿತ್ಯವೇ ಆಧುನಿಕ ಕನ್ನಡ ಕಾವ್ಯಕ್ಕೆ ಜೀವಾಳ: ಡಾ. ಬಸು ಬೇವಿನಗಿಡದ
ಯರಗಟ್ಟಿ 04: ಕನ್ನಡ ಸಾಹಿತ್ಯದ ಮೂಲ ಬೇರುಗಳು ಜನಪದ ಸಾಹಿತ್ಯದಲ್ಲಿ ಅಡಗಿದ್ದು, ಅದುವೇ ಆಧುನಿಕ ಕನ್ನಡ ಕಾವ್ಯಕ್ಕೆ ಜೀವಾಳವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಹಾಗೂ ಧಾರವಾಡ ಆಕಾಶವಾಣಿ ಕೇಂದ್ರದ ಹಿರಿಯ ನಿರ್ದೇಶಕ ಡಾ. ಬಸು ಬೇವಿನಗಿಡದ ಹೇಳಿದರು.
ಸಮೀಪದ ಸತ್ತೀಗೇರಿ ಗ್ರಾಮದಲ್ಲಿ ಮಳಿಮಲ್ಲೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಪದರು ತಮ್ಮ ಜೀವನದ ಕಷ್ಟನಷ್ಟಗಳನ್ನು ಸಹಿಸಿಕೊಂಡು ಅದರ ಫಲವನ್ನು ಹಾಡು, ಕಥೆ, ಲಾವಣಿ, ಗೀಗಿ ಪದಗಳ ಮೂಲಕ ನೀಡಿದರು. ಕವಿಗಳು ಇಂಥಹ ಸಮೃದ್ಧ ಪರಂಪರೆಯನ್ನು ಅವಲೋಕಿಸಿ ಮುಂದುವರೆಯಬೇಕು ಎಂದು ಪ್ರತಿಪಾದಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಯರಗಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹಾಗೂ ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಪನ್ಮೂಲ ವ್ಯಕ್ತಿ ಡಾ. ಬಾಳಪ್ಪ ಚಿನಗುಡಿಯವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಕುಂಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ವೈ.ಎಂ. ಯಾಕೊಳ್ಳಿಯವರು ಮಾತನಾಡಿ ವಿದ್ಯಾರ್ಥಿ ದೆಸೆಯಿಂದಲೇ ಕಾವ್ಯಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಚಂದ್ರಶೇಖರ ಶಿವಾಚಾರ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಯರಗಟ್ಟಿ ತಾಲೂಕು ಕ.ಸಾ.ಪ. ಅಧ್ಯಕ್ಷರಾದ ತಮ್ಮಣ್ಣ ಕಾಮಣ್ಣವರ ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಊರುಗಳಿಂದ ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಈರಣ್ಣ ಹೊಸಮನಿ ನಿರೂಪಿಸಿ, ವಂದಿಸಿದರು. ಶ್ರೀಕಾಂತ ಕರಲಿಂಗಪ್ಪನವರ ಸ್ವಾಗತಿಸಿದರು.