ಯರಗಟ್ಟಿ

ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತ: ಡಾ. ಚಿನಗುಡಿ

ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತ: ಡಾ. ಚಿನಗುಡಿ

ಯರಗಟ್ಟಿ 19: ಸಮೀಪದ ಮುಗಳಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ 50 ಸಂಭ್ರಮಾಚರಣೆ ಪ್ರಯುಕ್ತ ಸರಣಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಬೆಳಗಾವಿ ಜಿಲ್ಲೆಯ ಜಾನಪದ ಸಾಹಿತ್ಯದ ಕುರಿತುಮಾತನಾಡಿದ ಉಪನ್ಯಾಸಕ ಡಾ. ಬಿ. ಆಯ್‌. ಚಿನಗುಡಿಯವರು ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ.ಕಲೆ, ಸಾಹಿತ್ಯ, ನೃತ್ಯ (ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಇತ್ಯಾದಿ), ನಾಟಕ (ಬಯಲಾಟ, ದೊಡ್ಡಾಟ, ಶ್ರೀ ಕೃಷ್ಣಪಾರಿಜಾತ, ಯಕ್ಷಗಾನ) ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು ಎಂದರು. 

ಕನ್ನಡ ಜಾನಪದ ಸಂಸ್ಕೃತಿಯ ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ. ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆಗಳು ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿವೆ ಎಂದೆನಿಸಿದರೂ ತನ್ನ ಮೂಲನೆಲೆಯಾದ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಭದ್ರವಾಗಿ ಊಳಿಸಿಕೊಂಡಿರುವುದು ಸಮಾಧಾನ ತರುವ ಸಂಗತಿಯಾಗಿದೆ ಎಂದು ಚಿನಗುಡಿಯವರು ಹೇಳಿದರು. 

ಕಂಸಾಳೆ ಪದ, ಗೀಗಿಪದ, ಕೋಲಾಟದ ಪದ, ರಾಗಿ ಬೀಸೋ ಪದ, ಸುಗ್ಗಿ ಹಾಡುಗಳು, ಹೀಗೆ ಇನ್ನೂ ಅನೇಕ ವಿವಿಧ ಬಗೆಯ ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ದೇವರುಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಈ ಜಾನಪದ ಗೀತೆಗಳನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇವು ಹಳ್ಳಿಯ ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿ ಎನ್ನಬಹುದು ಎಂದು ಹೇಳಿದರು. 

ಹೂಮಾಲೆಯಂಥ ಮೇಲಿನ ಸಾಲುಗಳನ್ನು ಯಾರು ಯಾವಾಗ ಬರೆದರೋ ಗೊತ್ತಿಲ್ಲ, ಇವು ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಹರಿದು ಬಂದ ನುಡಿಗಳು, ನಮ್ಮ ಹಳ್ಳಿಗಳಲ್ಲಿ ಕಲೋಪಾಸಕತ್ವವನ್ನು, ಸೃಜನಶೀಲತೆಯನ್ನು ಮತ್ತು ಮಾಧುರ್ಯವನ್ನು ಹಳ್ಳಿಗರಿಗೆ ತಿಳಿಯದಂತೆ ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು ಎಂದು ಚಿನಗುಡಿಯವರು ಹೇಳಿದರು. 

ಪ್ರಾಯಶಃ ಸಹಸ್ರಾರು ವರ್ಷದ ಹಿಂದೆ ಜಗತ್ತಿನಲ್ಲೆಲ್ಲ ಇದ್ದುದ್ದು ಜಾನಪದವೊಂದೇ,. ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದವಾಗಿರಬಹುದು. ತನ್ನ ಸುತ್ತಲಿನ ಪರಿಸ್ಥಿತಿಗೆ ತಕ್ಕಂತೆ ತಂತ್ರಜ್ಞಾನಗಳನ್ನೂ, ಆರೋಗ್ಯ ರಕ್ಷಣೆಗೆ ವೈದ್ಯಕೀಯವನ್ನು, ಪ್ರಕೃತಿಯ ಬಿರುಸಿಗೆ ಉತ್ತರವಾಗಿ ಭಕ್ತಿಯನ್ನೂ ಬೆಳೆಸಿಕೊಂಡಿರಬಹುದು. 

ಪ್ರತಿಯೊಂದು ಸಾಮಾಜವೂ ತನ್ನ ಪುರಾತನರ ಸಾರವನ್ನು ಹೀರಿ ತನ್ನ ಸದ್ಯದ ಬದುಕಿಗೊಂದು ಅರ್ಥವನ್ನೂ, ತನ್ನ ಸದ್ಯದ ಸಮಸ್ಯೆಗಳಿಗೊಂದು ಪರಿಹಾರವನ್ನೂ, ತನ್ನ ಭಕ್ತಿಗೊಂದು ರೂಪವನ್ನೂ -ಕಲೆ, ತಂತ್ರಜ್ಞಾನ ಇತ್ಯಾದಿಗಳ ಬೆಳವಣಿಗೆಯನ್ನೂ ಸಾಮುದಾಯಿಕವಾಗಿ ನಿರ್ವಹಿಸುತ್ತದೆ. ಇದು ಯಾವುದೇ ಅಧಿಕಾರದ, ಸಂಪ್ರದಾಯದ ಪೋಷಣೆಯಿಲ್ಲದೇ ತನ್ನಿಂದ ತಾನೇ ಹರಿದು ಬಂದು ಮಣ್ಣಿನ ಸಂಸ್ಕೃತಿಯ ಸಾರವಾಗಿ 'ಜಾನಪದ' ಎನ್ನಿಸಿಕೊಂಡಿದೆ ಎಂದು ಅವರು ಹೇಳಿದರು.ಉದ್ಘಾಟಕರಾದ ಗ್ರಾ. ಪಂ. ಅಧ್ಯಕ್ಷೆ ರುಕಮ್ಮ ಕೊಪ್ಪದ, ಕಸಾಪ ತಾಲೂಕು ಅಧ್ಯಕ್ಷ ತಮ್ಮಣ್ಣಾ ಕಾಮಣ್ಣವರ, ಎಸ್ ಎಸ್‌. ಕುರುಬಗಟ್ಟಿಯಠ, ಆರ್‌. ಎಲ್‌. ಜೂಗನ್ನವರ, ರಾಮನಗೌಡ ಗಂಗರಡ್ಡಿ, ಆರ್‌. ಎಲ್‌. ಧರ್ಮಟ್ಟಿ, ಬಸವರಾಜ ಮಾಯನ್ನವರ, ಪದ್ಮಾವತಿ ಮುರಗಟ್ಟಿ, ಮಾಯವ್ವ ದಳವಾಯಿ, ಸಾಹಿತ್ಯ ವಿಠ್ಠಲ ದಳವಾಯಿ, ಶಾಲಾ ಮುಖ್ಯೋಪಾಧ್ಯಾಯ ಎ. ಎಸ್‌. ನದಾಫ, ಡಾ. ವಿಶ್ವನಾಥ ತಾವಂಶಿ ಸೇರಿದಂತೆ ಅನೇಕ ಇದ್ದರು. 


ಸುದ್ದಿ ಓದಿ