ಜೂನ್ 1 ರಿಂದ ಜುಲೈ 31 ರವರೆಗೆ ಒಟ್ಟು 61 ದಿನಗಳ ಕಾಲ ಮೀನುಗಾರಿಕೆಗೆ ನಿಷೇಧ

ಜೂನ್ 1 ರಿಂದ ಜುಲೈ 31 ರವರೆಗೆ ಒಟ್ಟು 61 ದಿನಗಳ ಕಾಲ ಮೀನುಗಾರಿಕೆಗೆ ನಿಷೇಧ    Fishing banned for a total of 61 days from June 1 to July 31

ಕಾರವಾರ  29: ಉತ್ತರ ಕನ್ನಡ ಜಿಲ್ಲೆಯೂ ಸೇರಿದಂತೆ ಕರ್ನಾಟಕದ ಕರಾವಳಿಯಲ್ಲಿ ಯಾಂತ್ರೀಕೃತ ದೋಣಿಗಳ ಮೀನುಗಾರಿಕೆ ಚಟುವಟಿಕೆಗಳಿಗೆ ಜೂನ್ 1 ರಿಂದ ಜುಲೈ 31 ರವರೆಗೆ ಒಟ್ಟು 61 ದಿನಗಳ ನಿಷೇಧವನ್ನು ಹೇರಿ ಮೀನುಗಾರಿಕೆ ಇಲಾಖೆ ಆದೇಶ ಹೊರಡಿಸಿದೆ. ಮುಂಗಾರಿನ ಅವಧಿಯಲ್ಲಿ ಮೀನಿನ ಸಂತಾನೋತ್ಪತ್ತಿ ಕಾಲವಾದ ಕಾರಣ ಮೀನುಗಾರಿಕೆಗೆ ನಿಷೇಧ ಹೇರುವ ವಾಡಿಕೆ ದೇಶದ ಕರಾವಳಿಯಲ್ಲಿ ಚಾಲ್ತಿಯಲ್ಲಿದೆ. ಈ ವರ್ಷ ಸಹ ವಾಡಿಕೆಯಂತೆ ಮಳೆಗಾಲದಲ್ಲಿ ಯಾಂತ್ರಿಕೃತ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಯಾಂತ್ರೀಕೃತ ಮತ್ತು 10 ಹೆಚ್‌.ಪಿ. ಅಶ್ವಶಕ್ತಿಗಿಂತ ಅಧಿಕ ಸಾಮರ್ಥ್ಯದ ಇನ್‌ಬೋರ್ಡ್‌ ಅಥವಾ ಓಟ್‌ಬೋರ್ಟ್‌ ಯಂತ್ರ ಅಳವಡಿಸಿರುವ ಮೀನುಗಾರಿಕೆ ದೋಣಿಗಳಲ್ಲಿ ಯಾವುದೇ ಬಲೆಗಳನ್ನು, ಮೀನು ಹಿಡಿಯುವ ಸಾಧನಗಳನ್ನು ಉಪಯೋಗಿಸಿ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಗಳಿಗೆ ಜೂನ್ 1 ರಿಂದ ಜುಲೈ 31 ರವರೆಗೆ ಒಟ್ಟು 61 ದಿನಗಳ ನಿಷೇಧವನ್ನು ಹೇರಿ ಆದೇಶ ಹೊರಡಿಸಲಾಗಿದೆ ಹಾಗೂ ಈ ನಿಷೇಧಿತ ಅವಧಿಯಲ್ಲಿ ದೋಣಿಗಳನ್ನು ಸಾಗಿಸುವ ಉದ್ದೇಶಕ್ಕಾಗಿ ಹತ್ತು ಹೆಚ್‌.ಪಿ. ಅಶ್ವಶಕ್ತಿಗಿಂತ ಕಡಿಮೆ ಸಾಮರ್ಥ್ಯದ ಮೋಟಾರೀಕೃತ ದೋಣಿ ಮತ್ತು ಸಾಂಪ್ರದಾಯಿಕ ನಾಡದೋಣಿಗಳು ಸುರಕ್ಷತಾ ಕ್ರಮಗಳೊಂದಿಗೆ ಮೀನುಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ.

ಮೀನುಗಾರಿಕೆ ಇಲಾಖೆಯ ಆದೇಶದಲ್ಲಿ ನೀಡಲಾಗಿರುವ ಸೂಚನೆಗಳನ್ನು ಎಲ್ಲಾ ಯಾಂತ್ರೀಕೃತ ದೋಣಿಗಳ ಮಾಲೀಕರು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಈ ಸೂಚನೆಗಳನ್ನು ಮೀನುಗಾರಿಕೆ ಮಾಡುವವರು ಉಲ್ಲಂಘಿಸಿದ್ದಲ್ಲಿ, ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ನಿಯಮ ಉಲ್ಲಂಘನೆ ಮಾಡಿದರೆ ಬೋಟ್ ಗಳಿಗೆ ಸರ್ಕಾರದಿಂದ ನೀಡುವ ಮಾರಾಟ ಕರರಹಿತ ಡೀಸೆಲ್ ಹಾಗೂ ಯಾವುದೇ ಸಹಾಯ ಸೌಲಭ್ಯಗಳನ್ನು ರದ್ದುಗೊಳಿಸಲಾಗುವುದು. ಕರಾವಳಿ ಪ್ರದೇಶದ ಎಲ್ಲಾ ಮೀನುಗಾರರ ಹಿತದೃಷ್ಟಿಯಿಂದ ಹೊರಡಿಸಲಾದ ಈ ಆದೇಶವನ್ನು ಎಲ್ಲಾ ಮೀನುಗಾರರು ಪಾಲಿಸಿ ಸಹಕರಿಸುವಂತೆ ಉತ್ತರ ಕನ್ನಡ ಜಿಲ್ಲಾ ಮೀನುಗಾರಿಕೆ ವಿನಂತಿಸಿದೆ......ಬಾಕ್ಸ ಮಾಡಿ...* ಮುಂಗಾರಿನ ಮೊದಲ ಅರವತ್ತು ದಿನ ಮೀನುಗಳು ಸಂತಾನೋತ್ಪತ್ತಿ ಮಾಡುವ ಸಮಯ. ಈ ಸಮಯದಲ್ಲಿ ಮೊಟ್ಟೆ ಇಡುವ ಮೀನುಗಳು , ಮರಿಗಳನ್ನು ಪೋಷಿಸುತ್ತವೆ. ಸಮುದ್ರ ಪ್ರಕ್ಷುಬ್ಧ ಇರುವ ಕಾರಣ ಹಾಗೂ ಮೀನು ಸಂತತಿ ಸಂತಾನೋತ್ಪತ್ತಿ ಕಾಲವಾದ ಕಾರಣ ಸಮುದ್ರ ಮೀನುಗಾರಿಕೆಗೆ ನಿಷೇಧ ಇರುತ್ತದೆ. ಇದನ್ನು ಮೀನುಗಾರರು ಉಲ್ಲಂಘನೆ ಮಾಡಬಾರದು.