ಆತ್ಮಹತ್ಯೆಗೆ ಶರಣಾದ ಯುವಕನ ಕುಟುಂಬಕ್ಕೆ ಆರ್ಥಿಕ ಸಹಾಯ
ತಾಳಿಕೋಟಿ: ದೇವರ ಹಿಪ್ಪರಗಿ ಮತಕ್ಷೇತ್ರದ ಜಾಲವಾದ ಗ್ರಾಮದಲ್ಲಿ ಇತ್ತೀಚಿಗೆ ಆತ್ಮಹತ್ಯೆಗೆ ಶರಣಾದ ಯುವಕ ಸಂತೋಷ ವಾಲಿಕಾರ ಕುಟುಂಬಕ್ಕೆ ಕಾಂಗ್ರೆಸ್ ಮುಖಂಡ ಸಮಾಜಸೇವಕ ಡಾ. ಪ್ರಭುಗೌಡ ಲಿಂಗದಳ್ಳಿ ಆರ್ಥಿಕ ಸಹಾಯ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿದರು.
ದೇವರ-ಹಿಪ್ಪರಗಿ ಮತಕ್ಷೇತ್ರದಲ್ಲಿ ಈಗಾಗಲೆ ತಮ್ಮ ಹಲವಾರು ಸಮಾಜಸೇವಾ ಕಾರ್ಯಗಳ ಮುಖಾಂತರ ಮನೆಮಾತಾಗಿರುವ ನಾಡಿನ ಖ್ಯಾತ ನೇತ್ರತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿಯವರು ಇಡೀ ಕ್ಷೇತ್ರದಲ್ಲಿರುವ ಬಡವರಿಗೆ-ದುರ್ಬಲರಿಗೆ ಉಚಿತವಾಗಿ ಆರೋಗ್ಯ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಜೊತೆಗೆ ಪ್ರಕೃತಿ-ವಿಕೋಪ, ಆತ್ಮಹತ್ಯೆ, ಸಾಲಭಾದೆ, ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಆರ್ಥಿಕ ಸಹಾಯವನ್ನೂ ತಮ್ಮ ಅನುಗ್ರಹ ವಿಷನ್ ಫೌಂಡೇಶನ್ದ ವತಿಯಿಂದ ನಿರಂತರವಾಗಿ ಮಾಡುತ್ತಿದ್ದಾರೆ.
ಅವರೊಬ್ಬ ಹೃದಯಶ್ರೀಮಂತಿಕೆಯನ್ನು ಹೊಂದಿದ ವ್ಯಕ್ತಿ ಎಂಬುದನ್ನು ಮತ್ತೋಮ್ಮೆ ಸಾಬೀತು ಪಡಿಸುವಂತೆ ಕ್ಷೇತ್ರದ ಜಾಲವಾದ ಗ್ರಾಮದ ಯುವಕ ಸಂತೋಷ ವಾಲಿಕಾರ ಆತ್ಮಹತ್ಯೆಗೆ ಶರಣಾದಾಗ ಅತನ ಕುಟುಂಬಕ್ಕೆ ರೂ. 50 ಸಾವಿರ ಧನ ಸಹಾಯ ನೀಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲನಗೌಡ ಪಾಟೀಲ ಹಣಮಂತ ಭಜಂತ್ರಿ, ಶಂಕರಲಿಂಗ ವಾಲಿಕಾರ, ಕುಟುಂಬದ ಸದಸ್ಯರು, ಗ್ರಾಮಸ್ಥರು ಇದ್ದರು.