ತಾಳಿಕೋಟಿ

ಸಂವಿಧಾನ ಬದ್ದ ಹಕ್ಕಿಗಾಗಿ ಹೋರಾಟ ಅವಶ್ಯ: ಹಿರೇಮಠ

ಸಂವಿಧಾನ ಬದ್ದ ಹಕ್ಕಿಗಾಗಿ ಹೋರಾಟ ಅವಶ್ಯ: ಹಿರೇಮಠ


ತಾಳಿಕೋಟೆ: ಜಂಗಮರು ಆಚಾರವಂತರಾಗಬೇಕು. ತಮ್ಮ ಸಂವಿಧಾನ ಬದ್ದ ಹಕ್ಕಿಗಾಗಿ ಹೋರಾಟ ಮಾಡಬೇಕೆ ವಿನ: ಕೇವಲ ಜಯಂತಿಗಳಲ್ಲಿ ಮಾತ್ರ ಒಂದಾಗಿ ಜಯಘೋಷ ಕೂಗಿ ಮರೆತು ಹೋಗುವುದಲ್ಲ ಎಂದು ಮುದ್ದೇಬಿಹಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಅನ್ಯಾಸಕ ಐ.ಬಿ.ಹಿರೇಮಠ ಹೇಳಿದರು. 

ಅವರು ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಜಂಗಮ ಸಮಾಜದ ವತಿಯಿಂದ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವದಲ್ಲಿ ಬುಧವಾರ ಮಾತನಾಡಿದರು.  

ಸಮಾಜ ಸಂಘಟಿತವಾಗಬೇಕು. ಅತ್ಯಂತ ಕಡುಬಡತನದಲ್ಲಿರುವ ಜನರಿಗೆ ಸಹಾಯ ಸಹಕಾರ ನೀಡುವಲ್ಲಿ ಸಮಾಜದ ಸಂಘ ಸಂಸ್ಥೆಗಳು ಮಠ ಮಾನ್ಯಗಳು ಮುಂದೆ ಬರಬೇಕು ಎಂದರು. 

ಗುಂಡಕನಾಳ ಬೃಹನ್ಮಠದ  ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಂಚಾಚಾರ್ಯ ಬ್ಯಾಂಕ್ ಸಮಾಜದ ಅಭಿವೃದ್ಧಿಗಾಗಿ ಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಬೇಡ ಜಂಗಮ ಪ್ರಮಾಣ ಪತ್ರ ಸಿಗುವವರೆಗೂ ಹೋರಾಟ ನಿಲ್ಲಬಾರದು ಎಂದರು. 

ನಾವದಗಿ ಪಟ್ಟದ್ದೇವರಾದ ರಾಜೇಂದ್ರ ಒಡೆಯರ, ಪಡೇಕನೂರ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನಮ್ಮ ನಮ್ಮಲ್ಲಿಯ ಕಿತ್ತಾಟ ಬಿಟ್ಟು ಎಲ್ಲರೂ ಒಂದಾಗಿ, ಬೇಡ ಜಂಗಮ ಹೋರಾಟಕ್ಕೆ ಕೈಜೋಡಿಸಿ, ಜಂಗಮರ ಹೋರಾಟ ನ್ಯಾಯದ ಪರವಾದ ಹೋರಾಟ, ಬಡ ಜಂಗಮರಿಗಾಗಿ ಹೋರಾಟ ಹಮ್ಮಿಕೊಂಡಿದ್ದು ಅದಕ್ಕೆ ಕೈ ಜೋಡಿಸಬೇಕು ಎಂದರು.   

ವೇದಿಕೆಯಲ್ಲಿದ್ದ ಸಾಸನೂರು - ತುಂಬಗಿ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಚಬನೂರ ಜೋತಿಷ್ಯ ರತ್ನ ಪುರಸ್ಕೃತ ರಾಮಲಿಂಗಯ್ಯ ಸ್ವಾಮೀಜಿ, ಅಸ್ಕಿ ಹಿರೇಮಠದ ಪಟ್ಟದ್ದೇವರು, ಗದಗ ವೀರೇಶ್ವರ ಪುಣ್ಯಾಶ್ರಮದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು.    ವೇದಿಕೆಯಲ್ಲಿ ಮಾತೋಶ್ರೀ ಶತಾಯುಷಿ ಗುರುಬಸಮ್ಮ ಬಿರಾದಾರ, ಹಿರಿಯರಾದ ಬಿ.ವಿ.ಚೊಂಡಿಪಾಟೀಲ ಇದ್ದರು. 

ಪಂಚಾಚಾರ್ಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಸಯ್ಯ ಹಿರೇಮಠ, ಪುರಸಭೆ ಸದಸ್ಯ ಸಂಗಯ್ಯ ಹಿರೇಮಠ, ಗಜದಂಡಯ್ಯ ಹಿರೇಮಠ, ಸೂರಜ ಹಿರೇಮಠ, ಶ್ರೀಗುರು ಹಿರೇಮಠ ಸೇರಿದಂತೆ ಇತರರು ಇದ್ದರು. 

ಎಸ್‌.ಎಸ್‌.ಎಲ್‌.ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಜಂಗಮ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ ಜರುಗಿತು. ಅಪೇಕ್ಷಾ ಹಾಗೂ ರುಚಿ ಅವರಿಂದ ಭರತನಾಟ್ಯ ಜರುಗಿತು. ಸೃಷ್ಠಿ ಹಿರೇಮಠ ಸ್ವಾಗತ ಗೀತೆ ಹಾಡಿದರು. ರಾಜಶೇಖರ ಹಿರೇಮಠ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಶಿವಶಂಕರ ಹಿರೇಮಠ ಮಾತನಾಡಿದರು. ಪ್ರೊ.ಸೋಮಶೇಖರ ಹಿರೇಮಠ ಹಾಗೂ ಶಿಕ್ಷಕಿ ಎಸ್‌.ಎಸ್‌.ಗದಿಗಿನಮಠ ನಿರೂಪಿಸಿದರು. ಓಂಪ್ರಕಾಶ ಡೋಣೂರಮಠ ವಂದಿಸಿದರು. ಬೆಳಿಗ್ಗೆ ಪಟ್ಟಣದ ಖಾಸ್ಗತೇಶ್ವರ ಮಠದಿಂದ ರೇಣುಕಾಚಾರ್ಯರ ಭವ್ಯ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣ ಕುಂಭ ಹೊತ್ತು ಬಾಗವಹಿಸಿದರು. ಭಾಜಾ ಭಜಂತ್ರಿ, ಕರಡಿ ಮಜಲು ಬಳ್ಳಾರಿಯ ವೀರಗಾಸೆ ತಂಡದ ಪ್ರದರ್ಶನ ಗಮನ ಸೆಳೆಯಿತು. 


ಸುದ್ದಿ ಓದಿ