12 ತಿಂಗಳು ಕೂಲಿಕಾರರಿಗೆ ಕೆಲಸ ನೀಡದಿದ್ದರೆ ತೀವ್ರ ಹೋರಾಟ: ಕೋಕಲೆ
ಲೋಕದರ್ಶನ ವರದಿ
ಸಂಬರಗಿ 01: ಗಡಿಭಾಗದ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ತುಂತುರು ಮಳೆಯಾಗುತ್ತಿರುವ ಹಿನ್ನೆಲೆ ಸಾರ್ವಜನಿಕರಿಗೆ ಉದ್ಯೋಗ ಖಾತರಿ ಕೆಲಸ ಸ್ಥಗಿತಗೊಂಡ ಕಾರಣ ಕೂಲಿಕಾರರು ಕೆಲಸವಿಲ್ಲದೇ ಅಲೆದಾಡುತ್ತಿದ್ದು, 100 ದಿನ ಕೆಲಸ ಮಾಡಲು ಕೂಲಿಕಾರರಿಗೆ ಕೆಲಸವಿಲ್ಲ, ಆದ್ದರಿಂದ ಅವರಿಗೆ ಹೊಟ್ಟೆಗಾಗಿ ಕೂಲಿಕೆಲಸಕ್ಕಾಗಿ ಗಡಿಯ ಮಹಾರಾಷ್ಟ್ರದ ಊರುಗಳಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರಕಾರ 365 ದಿನಗಳಲ್ಲಿ 100 ದಿನ ಮಾತ್ರ ಒಬ್ಬ ಕೂಲಿಕಾರರಿಗೆ ಕೆಲಸ ನೀಡುತ್ತಿದ್ದಾರೆ. 100 ದಿನ ಹಾಜರಾತಿ ತುಂಬಿದ ನಂತರ ಆ ಕೂಲಿಕಾರರು ಕೆಲಸವಿಲ್ಲದೇ ಹೊಟ್ಟೆಗಾಗಿ ಮಾಡೋದು ಏನು..? ಎಂಬ ಪ್ರಶ್ನೆ ಕಾಡುತ್ತಿದೆ. ಸದ್ಯದಲ್ಲಿ ಅನಂತಪೂರ ಹಾಗೂ ಮದಭಾವಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ 32 ಗ್ರಾಮಗಳಲ್ಲಿ ಮಳೆಯಿಂದ ಉದ್ಯೋಗ ಖಾತರಿ ಕಲಸ ವಿಳಂಬವಾಗುತ್ತಿದೆ. 100 ಹಾಜರಾತಿ ತುಂಬಿದ ನಂತರ ಗಡಿಭಾಗದ ನೂರಾರು ಕೂಲಿಕಾರರಿಗೆ ಕೆಲಸವಿಲ್ಲದೇ ಮರಳಿ ಸಾಂಗಲಿ ಜಿಲ್ಲೆಯ ಗ್ರಾಮಗಳಿಗೆ ಜನರು ಕೆಲಸಕ್ಕೆ ಹೋಗುವ ಪರಿಸ್ಥಿತಿ ಬಂದೊದಗಿದೆ. ಹಲವಾರು ವೇಳೆ ಅಧೀಕಾರಿಗಳ ಗಮನಕ್ಕೆ ತಂದರೂ ಸಹ 100 ದಿನ ಕೆಲಸ ಮಾಡಿದ ಕೂಲಿಕಾರರಿಗೆ ಕೆಲಸದ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ಕೂಲಿಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು, ತುಂತುರು ಮಳೆಯಿಂದ ಕೆಲಸದಲ್ಲಿ ವ್ಯತ್ಯಯ ಬರುತ್ತಿದೆ. ಕೂಲಿಕಾರರು ಕೆಲಸದ ಸ್ಥಳಗಳಿಗೆ ಕೂಲಿಗಾಗಿ ಹೋಗಿ ಮರಳಿ ಮನೆಗೆ ಹಿಂತಿರುಗುವ ಸ್ಥಿತಿ ಬರುತ್ತಿದೆ.
ರಾಜ್ಯಸರ್ಕಾರ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳನ್ನು ಪರಿಹಾರಗೊಳಿಸುತ್ತಿದ್ದಾರೆ. ಗಡಿಗ್ರಾಮಗಳು ಸತತ ಬರಗಾಲದಲ್ಲಿ ಸಿಲುಕಿ ಪರಿತಪಿಸುವ ಸ್ಥಿತಿ ಬಂದಿದೆ. ಆದರೆ, ಗಡಿಭಾಗ ಬರಗಾಲ ಘೋಷಣೆಯಾಗಿಲ್ಲ ಆ ಕಾರಣ ಬರಗಾಲದ ಸೌಲಭ್ಯಗಳು ಸಿಗುತ್ತಿಲ್ಲ, ತಾಲೂಕಾ ಹಾಗೂ ಜಿಲ್ಲಾಡಳಿತ ಈ ಭಾಗಕ್ಕೆ ಭೇಟ್ಟಿ ನೀಡಿಲ್ಲ, ಕುಡಿ ನೀರಿನ ಟ್ಯಾಂಕರ್ ಪ್ರಾರಂಭವಿದ್ದರೂ ಸಹ ಅನುದಾನದ ಕೊರತೆಯಿಂದ ಟ್ಯಾಂಕರ್ ಗಳು ಸ್ಥಗಿತಗೊಳ್ಳುತ್ತಿವೆ. ಗಡಿಭಾಗದ ಗ್ರಾಮಗಳು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿವೆ.
ಈ ಕುರಿತು ಚಿಕ್ಕೋಡಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಕೋಕಲೆ ಇವರನ್ನು ಸಂಪರ್ಕಿಸಲಾಗಿ ಈಗಾಗಲೇ ಸರ್ಕಾರ ಬರಗಾಳ ಘೋಷಣೆ ಮಾಡಲು ಹಿಂದೇಟು ಹಾಕುತ್ತಿದೆ. ಶೀಘ್ರದಲ್ಲಿ ಬರಗಾಲ ಘೋಷಣೆ ಮಾಡಿ, 12 ತಿಂಗಳು ಕೂಲಿಕಾರರಿಗೆ ಕೆಲಸ ನೀಡಬೇಕು ಇಲ್ಲದಿದ್ದರೆ ಪಕ್ಷದಿಂದ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಥಣಿ ತಾಲೂಕಾ ಪಂಚಾಯತ ಸಹಾಯಕ ನಿರ್ದೇಶಕ ಮೊಹಮ್ಮದ ಕೊತವಾಲ ಇವರನ್ನು ಸಂಪರ್ಕಿಸಲಾಗಿ ಸರ್ಕಾರದ ನೀಯಮದ ಪ್ರಕಾರ 100 ದಿನ ಕೆಲಸ ನೀಡಿದ ನಂತರ ಮುಂದೆ ಕೆಲಸ ನೀಡಲು ನಮಗೆ ಅವಕಾಶವಿಲ್ಲ, ಆದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಂಡು ಸ್ಥಗಿತಗೊಂಡಿರುವ ಉದ್ಯೋಗಖಾತರಿ ಯೋಜನೆ ಕೆಲಸವನ್ನು ಪುನರಾರಂಭ ಮಾಡುತ್ತೇವೆ ಎಂದು ಹೇಳಿದರು.