ನೂತನ ಎಸ್ಡಿಎಂಸಿ ಪದಾಧಿಕಾರಿಗಳಿಗೆ ಸನ್ಮಾನ
ಬ್ಯಾಡಗಿ 16: ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ’ಪ್ರೇರಣಾ’ ಹೆಸರಿನ ಕಾರ್ಯಕ್ರಮವನ್ನು ಈ ಶೈಕ್ಷಣಿಕ ವರ್ಷದಿಂದ ಮುಂದುವರೆಸಲಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.
ತಾಲೂಕಿನ ಮಾಸಣಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಹಪಠ್ಯ ಚಟುವಟಿಕೆ ಮತ್ತು ಪ್ರೇರಣಾ ಕ್ಲಬ್ ಉದ್ಘಾಟನೆ ಹಾಗೂ ನೂತನ ಎಸ್’ಡಿಎಂಸಿ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅವರು ’ಶಿಕ್ಷಣ ಫೌಂಡೇಶನ್’ ಹೆಸರಿನ ಎನ್ಜಿಒ ಜತೆಗೆ ಶಿಕ್ಷಣ ಇಲಾಖೆಯು ಒಪ್ಪಂದ ಮಾಡಿಕೊಳ್ಳಲಾಗಿದ್ದು, ರಾಜ್ಯದ ಎಲ್ಲಾ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ರಚಿಸಿ ಸರ್ವಾಂಗೀಣ ವ್ಯಕ್ತಿತ್ವ ರೂಪಿಸಲು ಯೋಜನೆ ಅನುಷ್ಠಾನಗೊಳಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ವೃದ್ಧಿಸಲು ಶಿಕ್ಷಕರ ಮಾರ್ಗದರ್ಶನದೊಂದಿಗೆ ಜವಾಬ್ದಾರಿ ಮನೋಭಾವವನ್ನು ಬೆಸೆಯುವ ದಿಶೆಯಲ್ಲಿ ಪ್ರೇರಣಾ ಕ್ಲಬ್ ರಚಿಸಲು ಶಿಕ್ಷಣ ಇಲಾಖೆಯು ಮುಂದಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲರ ಸಹಭಾಗಿತ್ವ ಅವಶ್ಯವಾಗಿದೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಆರ್. ಬಿ. ಕಾಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಪ್ರೇರಣಾ ಕಾರ್ಯಕ್ರಮ ಕಳೆದ 2018-19ನೇ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿದೆ. ಈ ಯೋಜನೆ ಮೂಲಕ ದಾಖಲಾತಿ ಹೆಚ್ಚಳ, ಕಲಿಕಾ ಗುಣಮಟ್ಟ ಉತ್ತಮ ಪಡಿಸುವ ಗುರಿ ಹೊಂದಲಾಗಿದೆ. ಮಕ್ಕಳ ಶಿಕ್ಷಣ ಗುಣಮಟ್ಟ ಸುಧಾರಣೆ ಸಂಬಂಧ ಮಕ್ಕಳಿಗೆ ಹಸಿರು, ಬೆಳ್ಳಿ ಮತ್ತು ಗುಲಾಬಿ ಬಣ್ಣದ ಸ್ಟಾರ್ಗಳ ಮಾದರಿಯ ಬ್ಯಾಜ್ ನೀಡಲಾಗುವುದು. ನಿರಂತರ ಹಾಜರಾತಿ, ವೈಯಕ್ತಿಕ ಸ್ವಚ್ಛತೆ, ತರಗತಿ ಸ್ವಚ್ಛತೆ, ಆವರಣ ಸ್ವಚ್ಛತೆ, ಸಸಿ ನೆಡುವುದಕ್ಕೆ ಹಸಿರು ಸ್ಟಾರ್ ನೀಡಲಾಗುತ್ತದೆ. ತರಗತಿಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮತ್ತು ಮನೆ ಪಾಠಗಳನ್ನು ಗುರುತಿಸಿ ಬೆಳ್ಳಿ ಬಣ್ಣದ ಸ್ಟಾರ್ಗಳನ್ನು ನೀಡಲಾಗುವುದು. ಸಹ ಪಠ್ಯಚಟುವಟಿಕೆಯಲ್ಲಿ ವಿದ್ಯಾರ್ಥಿಗಳ ಭಾಗವಸುವಿಕೆ ಗುರುತಿಸಿ ಗುಲಾಬಿ ಬಣ್ಣದ ಸ್ಟಾರ್ಗಳನ್ನು ನೀಡುವ ಯೋಜನೆ ಹೊಂದಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಮಲ್ಲೇಶಪ್ಪ ಬಣಕಾರ, ಎಸ್’ಡಿಎಂಸಿ ಉಪಾಧ್ಯಕ್ಷ ವಸಂತ ಲಕ್ಕುಂಡಿ, ಎಪಿಎಂಸಿ ಉಪಾಧ್ಯಕ್ಷರ ಉಳಿವೆಪ್ಪ ಕುರುವತ್ತಿ, ಸದಸ್ಯ ಶಿವಪ್ಪ ಕುಮ್ಮೂರ, ಗ್ರಾ.ಪಂ. ಸದಸ್ಯರಾದ ನಾಗರಾಜ ಕೊರ್ಲಿ, ಶಿವರಾಜ ಬನ್ನಿಹಟ್ಟಿ, ರೇಣುಕವ್ವ ಪಡಿಯಣ್ಣನವರ, ಶೇಖಪ್ಪ ಆಲದಗೇರಿ, ನೀಲಗಿರಿಯಪ್ಪ ಕಾಕೋಳ, ಬಸನಗೌಡ ಸಣ್ಣಗೌಡ್ರ, ಸುರೇಶ ದೇಸಾಯಿ, ಪ್ರಕಾಶ ಬನ್ನಿಹಟ್ಟಿ, ರುದ್ರಪ್ಪ ಮುಳಗುಂದ, ಸಂಜೀವಪ್ಪ ಹೂಲಿಹಳ್ಳಿ, ಎಸ್.ಬಿ.ಇಮ್ಮಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಚ್.ಟಿ. ಭರಮಗೌಡರ ಸ್ವಾಗತಿಸಿದರು. ಜೀವರಾಜ ಛತ್ರದ ಕಾರ್ಯಕ್ರಮವನ್ನು ನಿರೂಪಿಸಿದರು. ಎಂ ಎಸ್. ಶಶಿಧರ ವಂದಿಸಿದರು.