ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮಲ್ಲಯ್ಯ ಪುರಾಣಿಕಮಠ ಅವರಿಗೆ ಸನ್ಮಾನ
ಲೋಕದರ್ಶನ ವರದಿ
ಯಲಬುರ್ಗಾ 02: ಶಿಕ್ಷಕ ವೃತ್ತಿಯು ಸಮಾಜದ ಭವಿಷ್ಯ ರೂಪಿಸುವ ಪವಿತ್ರ ಕಾರ್ಯವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ನಿಸ್ವಾರ್ಥ ಸೇವೆಗೆ ಸಂದ ಗೌರವ ಶಿಕ್ಷಕರಿಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ಪೂಜ್ಯರು ಆಶೀರ್ವದಿಸಿದರು.
ಇತ್ತೀಚಿಗೆ ವಿಜಯಪುರದ ಕಂದಗಲ್ ಹನಮಂತರಾಯ ರಂಗಮಂದಿರದಲ್ಲಿ ಸೆಪ್ಟೆಂಬರ್ 27ರಂದು ನಡೆದ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲೆಗಳ ಒಕ್ಕೂಟದಿಂದ 2026-27ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಟ್ಟಣದ ಶ್ರೀ ವಿದ್ಯಾಸಾಗರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಲ್ಲಯ್ಯ ಎಸ್. ಪುರಾಣಿಕಮಠ ಅವರಿಗೆ ಪ್ರದಾನ ಮಾಡಲಾಯಿತು.
ಈ ಹಿನ್ನೆಲೆಯಲ್ಲಿ ಶ್ರೀ ಸಿದ್ಧರಾಮೇಶ್ವರ ವಿದ್ಯಾಪೀಠದ ಅಧ್ಯಕ್ಷರಾದ ಸಂಸ್ಥಾನ ಹಿರೇಮಠ, ಪರಮಪೂಜ್ಯ ಶ್ರೀ ಷ.ಬ್ರ. ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಲ್ಲಯ್ಯ ಪುರಾಣಿಕಮಠ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆ ಹಾಗೂ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಶಸ್ತಿಯು ಅವರ ವೃತ್ತಿ ಜೀವನಕ್ಕೆ ಮತ್ತಷ್ಟು ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿ, ಅವರ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ಶಿಕ್ಷಕರಿಗೆ ದೊರೆತ ಈ ರಾಜ್ಯ ಮಟ್ಟದ ಗೌರವವು ಶಾಲೆಯ ಶೈಕ್ಷಣಿಕ ವಲಯದಲ್ಲಿ ಸಂತಸ ಮೂಡಿಸಿದ್ದು, ಇತರ ಶಿಕ್ಷಕರಿಗೂ ಪ್ರೇರಣೆಯಾಗಿದೆ ಎಂದರು.