ಯಾವುದೇ ಕ್ಷೇತ್ರದಲ್ಲಿ ಮೇಲು-ಕೀಳು, ಬೇಧವಿರದೇ ಮುನ್ನಡೆದಾಗ ಸಾಧನೆ ಸಾಧ್ಯ:
ತಾಳಿಕೋಟೆ14: ಸಾಧನೆ ಸಾಧಕನ ಸ್ವತ್ತು ಹೊರತು, ಯಾರ ಸ್ವತ್ತೂ ಅಲ್ಲ, ಯಾವುದೇ ಕ್ಷೇತ್ರದಲ್ಲಿ ಮೇಲು-ಕೀಳು, ಬೇಧವಿರದೇ ಮುನ್ನಡೆದಾಗ ಸಾಧನೆ ಸಾಧ್ಯ ಎಂದು ಖಾಸ್ಗತೇಶ್ವರ ಮಠದ ಪಿಠಾಧಿಪತಿ ಸಿದ್ದಲಿಂಗದೇವರು ಹೇಳಿದರು.
ಅವರು ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಶ್ರೀ ಖಾಸ್ಗತೇಶ್ವರ ಮಠ ಹಾಗೂ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕ ಪ್ರಥಮ ಸ್ಥಾನ ಪಡೆದ ಜಿಲ್ಲೆಯ ಎಂಟು ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಎಂಬ ಬಾವಿಯಲ್ಲಿ ಮನುಷ್ಯ ಜ್ಞಾನವೆಂಬ ನೀರು ತುಂಬಿಕೊಳ್ಳಬೇಕಾದರೆ ನಮ್ಮ ಅಜ್ಞಾನವೆಂಬ ಗಾಳಿಯನ್ನು ಹೊರಗೆ ಹಾಕಿದಾಗ ಮಾತ್ರ ಸಾಧ್ಯ. ಸಾಧನೆ ಯಾರ ಸ್ವತ್ತು ಅಲ್ಲ, ಆದರೆ ಸಾಧಿತ್ತೇನೆ ಎಂಬ ಗುರಿ ಇಟ್ಟುಕೊಂಡು ಆ ದಿಸೆಯಲ್ಲಿ ಮುನ್ನಡೆಯಬೇಕು. ಅಂದಾಗ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.
ವಿಜಯಪುರ ಉಪನಿರ್ದೇಶಕರ ಕಾರ್ಯಾಲಯದ ಶಿಕ್ಷಣಾಧಿಕಾರಿ ಎಂ.ಎ.ಗುಳೇದಗುಡ್ಡ ಮಾತನಾಡಿ, ಇಂದಿನವರೆಗೆ ವಿಜಯಪುರ ಜಿಲ್ಲೆಯಿಂದ ಪೂರ್ಣ ಅಂಕ ಪಡೆದವರ ಸಾಧನೆ ನಡೆದಿರಲಿಲ್ಲ. ಇದೇ ಪ್ರಥಮ ಬಾರಿಗೆ ವಿಜಯಪುರ ಜಿಲ್ಲೆಯಲ್ಲಿ ಅಂತಹ ಸಾಧನೆ ಮಾಡಿದ ಎಂಟು ವಿದ್ಯಾರ್ಥಿಗಳು ಬಂದಿರುವುದು ಒಂದು ಹೆಮ್ಮೆಯಾಗಿದೆ. ಅದರಲ್ಲಿ ಐದು ವಿದ್ಯಾರ್ಥಿಗಳು ಅಖಂಡ ಮುದ್ದೇಬಿಹಾಳ ತಾಲ್ಲೂಕಿನ ವಿದ್ಯಾರ್ಥಿಗಳು. ಮೈಲೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯವರೇ ನಾಲ್ಕುಜನ ಎಂಬುದು ಸಂಭ್ರಮ ಪಡಲು ಸಾಕು. ಸಾದನೆ ಮಾಡಿದ ಎಂಟು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಪ್ರಥಮಬಾರಿಗೆ ಸನ್ಮಾನಿಸುವ ಕಾರ್ಯ ಶ್ರೀಮಠದಿಂದ ಜರುಗುತ್ತಿದೆ. ಪ್ರತಿಭಾವಂತರಿಗೆ ಸನ್ಮಾನದ ಗದ್ದಲದಲ್ಲಿ ಮುಳುಗಿಹೋಗಬಹುದು. ಈ ಸಾಧನೆ ಎರಡನೆಯ ವರ್ಷದ ಪಿಯು ಪರೀಕ್ಷೆಯಲ್ಲಿ ತೋರಿ ಹಿಂದಿನ ಸಾಧನೆಯನ್ನು ಎತ್ತಿ ಹಿಡಿಯಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೀರೇಶ ಜೇವರಗಿ, ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ, ಬಲಶೆಟ್ಟಿಹಾಳ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ನೀಲಮ್ಮ ನಾಗರಬೆಟ್ಟ ಮಾತನಾಡಿದರು.
ಎಸ್.ಎಸ್.ಎಲ್ಸಿ ತಾಲ್ಲೂಕು ನೋಡಲ್ ಅಧಿಕಾರಿ ಎಚ್.ಎ.ಮೇಟಿ, ಸಾಹಿತಿ ಅಶೋಕ ಹಂಚಲಿ, ಶಿಕ್ಷಕ ಕಬೂಲ ಕೊಕಟನೂರ, ದಾನಿ ವೀರೇಶ ಬಾಗೇವಾಡಿ ವೇದಿಕೆ ಮೇಲಿದ್ದರು. ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರಾಮನಗೌಡ ಬಾಗೇವಾಡಿ ಅಧ್ಯಕ್ಷತೆ ವಹಿಸಿದ್ದರು.
ಸಿಂಚನಾ ಹಿರೇಮಠ ಸ್ವಾಗತಿಸಿದರು. ಅಶೋಕ ಸಜ್ಜನ ಸ್ವಾಗತಿಸಿದರು. ಸಾಹೇಬಗೌಡ ಬಿರಾದಾರ ನಿರೂಪಿಸಿದರು. ಶ್ರೀಕಾಂತ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು.