ಡಾ.ಬಸವರಾಜ, ಶಿವಾನಂದಗೆ ಕಾಗದ ಸಾಂಗತ್ಯ ಕಲಾ ಪುರಸ್ಕಾರ
ರಾಣಿಬೆನ್ನೂರ 19: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ದೃಶ್ಯಕಲಾ ಅಧ್ಯಯನ ವಿಭಾಗದ ಸಹಾಯಕ ಅಧ್ಯಾಪಕ ಡಾ.ಬಸವರಾಜ ಎಸ್ ಕಲೇಗಾರ ಇವರು ‘ಚಿತ್ರಕಾರನ ಬಹುಮುಖಿ ಚಿಂತನೆ’ ಎಂಬ ಪುಸ್ತಕಕ್ಕೆ ರಚಿಸಿದ ಚಿತ್ರಗಳಿಗೆ 2018 ಸಾಲಿನ ಪುರಸ್ಕಾರ ಹಾಗೂ ಬಾಗಲಕೋಟೆ ವಿಶ್ವವಿನೂತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಶಿವಾನಂದ ಹಿರೇಮಠ ರವರು ‘ಮಕ್ಕಳಿಗಾಗಿ ನೂರಾರು ಕವಿತೆಗಳು’ ಪುಸ್ತಕಕ್ಕೆ ರಚಿಸಿದ ಚಿತ್ರಗಳಿಗೆ 2019 ಸಾಲಿನ ಕಾಗದ ಸಾಂಗತ್ಯ ಕಲಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಕಾಗದ ಸಾಂಗತ್ಯ ವೇದಿಕೆ ಸೃಜನಶೀಲ ಕಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ ಪುಸ್ತಕದ ಒಳಪುಟಗಳಿಗೆ ಉತ್ತಮ ಚಿತ್ರ, ರೇಖಾಚಿತ್ರ ರಚಿಸಿದ ರಾಜ್ಯದ ಕಲಾವಿದರಿಂದ 2018 ಮತ್ತು 2019 ನೇ ಸಾಲಿನ ಪುಸ್ತಕಗಳನ್ನು ಆಹ್ವಾನಿಸಿತ್ತು.
ಈ ಪ್ರತಿಷ್ಠಿತ ಪ್ರಶಸ್ತಿಯು ನಗದು ಮೊತ್ತ, ಪುರಸ್ಕಾರ ಫಲಕ ಹಾಗೂ ಪುಸ್ತಕಗಳನ್ನು ಒಳಗೊಂಡಿರುತ್ತದೆ. ಪುರಸ್ಕಾರ ಸಮಾರಂಭವು ಜ.31 ರಂದು ನಡೆಯಲಿದೆ ಎಂದು ಕಾಗದ ಸಾಂಗತ್ಯದ ಅಧ್ಯಕ್ಷ, ಚಿತ್ರ ಕಲಾವಿದ ನಾಮದೇವ ಕಾಗದಗಾರ ಹೇಳಿದ್ದಾರೆ.