ದೇವಸ್ಥಾನ ಸೇವಾರ್ಥಿಗಳ ಸನ್ಮಾನ, ಉಡಿ ತುಂಬುವ ಕಾರ್ಯಕ್ರಮ
ಶಿಗ್ಗಾವಿ 17: ಸಮಾಜದಲ್ಲಿ ಅವಕಾಶ ವಂಚಿತ ಕಟ್ಟ ಕಡೆಯ ಬಡ ವ್ಯಕ್ತಿಯ ಸಮಸ್ಯೆಗಳನ್ನು ಸಂಸ್ಥೆ ಸವಾಲಾಗಿ ತೆಗೆದುಕೊಂಡು ತಮ್ಮ ಕೈಲಾದ ಸೇವೆ ಸಲ್ಲಿಸಲು ಸಂಸ್ಥೆ ಸನ್ನದ್ದವಾಗಿದೆ ಎಂದು ಗಂಗೆಬಾವಿ ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.
ಪಟ್ಟಣದ ಹೊರವಲಯದ ಗುಡ್ಡದ ದ್ಯಾಮವ್ವ ದೇವಸ್ಥಾನದಲ್ಲಿ ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ದೇವಸ್ಥಾನ ಸೇವಾರ್ಥಿಗಳ ಸನ್ಮಾನ ಮತ್ತು ಉಡಿ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಸಾಮಾಜಿಕ ಸೇವೆ ಸಲ್ಲಿಸುವ ಸಂಸ್ಥೆಯಾಗಿದ್ದು, ನಮ್ಮ ಸಂಸ್ಥೆ ಕೈಗೊಳ್ಳುವ ಸಮಾಜಮುಖಿ ಕೆಲಸಗಳು ಇನ್ನೊಬ್ಬರಿಗೆ ಪ್ರೇರಣೆಯಾಗಿ ಅವರು ಇಂತಹ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಎನ್ನುವುದು ಸಂಸ್ಥೆಯ ಉದ್ದೇಶವಾಗಿದೆ.
ಐತಿಹಾಸಿಕ ಗುಡ್ಡದ ದ್ಯಾಮವ್ವನ ದೇವಸ್ಥಾನದ ಸುತ್ತಮುತ್ತಲಿನ ಆವರಣ ಗಂಗೆಬಾವಿಯಂತೆ ರಾಜ್ಯಕ್ಕೆ ಮಾದರಿ ದೇವಸ್ಥಾನವಾಗುವಂತೆ ಅಭಿವೃದ್ಧಿ ಪಡಿಸುವ ಸಂಕಲ್ಪ ಮಾಡಿದ್ದೇನೆ. ಇದಕ್ಕೆ ದೇವಿಯ ಭಕ್ತರು, ಪೂಜಾರಿಗಳ ಸಹಕಾರ ನೀಡಬೇಕು. ಪಟ್ಟಣದ ಕಚೇರಿ ಓಣಿಯ ಮಹಿಳೆಯರು ನಿಸ್ವಾರ್ಥ ಭಾವನೆಯಿಂದ ದ್ಯಾಮವ್ವ ದೇವಿಯ ಜಾತ್ರೆಗೆ ಆಗಮಿಸಿದ ನೂರಾರು ಭಕ್ತರಿಗೆ ಹೋಳಿಗೆ ಊಟ ಉಣಬಡಿಸುವ ಮೂಲಕ ವಿಶೇಷ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ಇನ್ನೋಬ್ಬರಿಗೆ ಪ್ರೇರಣೆಯಾಗಲಿ. ಅಂತಹವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಂಸ್ಥೆ ಎಲ್ಲ ಮಹಿಳೆಯರು ಮತ್ತು ಓಣಿಯ ಹಿರಿಯರನ್ನು ಗೌರವಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಯಲಿಗಾರ ಕುಟುಂಬಸ್ಥರು ಕಚೇರಿ ಓಣಿಯ ಮಹಿಳೆಯರಿಗೆ ವಸ್ತ್ರದಾನದ ಜೊತೆಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿದರು, ರೈತ ಧ್ವನಿ ಸಂಪಾದಕ ಬಸವರಾಜ ಕುರಗೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಚೇರಿ ಓಣಿಯ ಹಿರಿಯರಾದ ಲಕ್ಷಣ ಬ್ಯಾಹಟ್ಟಿ ಮಾತನಾಡಿದರು. ಸುನೀತಾ ಯಲಿಗಾರ, ಗ್ರಾ.ಪಂ ಸದಸ್ಯ ನಾಗರಾಜ ಸೂರಗೊಂಡ, ಆಕಾಶ ಯಲಿಗಾರ, ಆಧ್ಯ ಯಲಿಗಾರ, ಮಂಜಪ್ಪ ಧಾರವಾಡ, ನಾಗರಾಜ ಕಲಾಲ, ರಾಮಚಂದ್ರ ಧಾರವಾಡ, ಫಕ್ಕಿರಪ್ಪ ಧಾರವಾಡ, ರಾಜು ಕೆಂಬಾವಿ, ಮಾರುತಿ ಕಲಾಲ ಮತ್ತಿತರರು ಉಪಸ್ಥಿತರಿದ್ದರು. ವರದಿಗಾರರಾದ ವಿಶ್ವನಾಥ ಬಂಡಿವಡ್ಡರ, ಬಸವರಾಜ ಹಡಪದ ಕಾರ್ಯಕ್ರಮ ನಿರ್ವಹಿಸಿದರು.