ಗ್ರಂಥಾಲಯಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲಕರ ಪುಸ್ತಕ ದೇಣಿಗೆ
ಯರಗಟ್ಟಿ 22: ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವಂಥ ಪುಸ್ತಕಗಳು ಲಭ್ಯವಿರುತ್ತವೆ ಅವುಗಳ ಸದುಪಯೋಗವನ್ನು ಯುವಜನತೆ ಪಡೆದು ಜ್ಞಾನಾರ್ಜನೆ ಮಾಡಿಕೊಂಡು ವಿವಿಧ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಬೇಕು ಎಂದು ಜೈಂಟ್ಸ್ ಗ್ರೂಪ್ ಅಧ್ಯಕ್ಷ ಶಿವಾಜಿ ಮಾನೆ ಹೇಳಿದರು. ಅವರು ಸಮೀಪದ ಮುನವಳ್ಳಿ ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಜೈಂಟ್ಸ್ ಸಪ್ತಾಹದ ಅಂಗವಾಗಿ ಪಟ್ಟಣದ ಗ್ರಂಥಾಲಯಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಹಕಾರಿಯಾಗುವ ಪುಸ್ತಕಗಳನ್ನು ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ನ್ಯಾಯವಾದಿ ಎಂ. ಎಂ. ಯಲಿಗಾರ ಮಾತನಾಡಿ ಮಾನವನ ಜ್ಞಾನ ವಿಕಾಸಕ್ಕೆ ಪುಸ್ತಕಗಳ ಕೊಡುಗೆ ಅಪಾರವಾಗಿದೆ. ಪುಸ್ತಕಗಳು ಉತ್ತಮ ಸ್ನೇಹಿತನಿದ್ದಂತೆ, ಪುಸ್ತಕಗಳು ಎಲ್ಲರಿಗೂ ಲಭ್ಯವಾಗಲಿ ಎಂದು ಪ್ರತಿ ವರ್ಷ ನಮ್ಮ ತಂದೆಯವರ ಸ್ಮರಣಾರ್ಥ ಹಲವಾರು ಗ್ರಂಥಾಲಯಗಳಿಗೆ ಪುಸ್ತಕ ದೇಣಿಗೆ ನೀಡುವ ಪರಿಪಾಠ ಹಾಕಿಕೊಳ್ಳಲಾಗಿದೆ ಎಂದರು.
ಜೈಂಟ್ಸ್ ಫೆಡರೇಶನ್ನ ಜಗದೀಶ ಹಂಪಣ್ಣವರ, ನ್ಯಾಯವಾದಿ ಮೋಹನ ಸರ್ವಿ, ಅಪ್ಪು ಅಮಠೆ, ಗ್ರಂಥಪಾಲಕ ಜಗದೀಶ ಶಿಕ್ರೆ, ಅರುಣಗೌಡ ಪಾಟೀಲ, ಪ್ರಶಾಂತ ತುಳಜಣ್ಣವರ, ಬಾಳು ಹೊಸಮನಿ, ವಿರಾಜ ಕೊಳಕಿ, ಅನಿಲ ಕಿತ್ತೂರ, ಎಂ.ಬಿ.ಅಷ್ಟಗಿಮಠ, ವೀರಣ್ಣ ಕೊಳಕಿ, ಎಸ್.ಬಿ.ಗಂಗಾವತಿ, ವೈ.ಪಿ. ಪೂಜೇರ ಸೇರಿದಂತೆ ಇತರರು ಇದ್ದರು.