ತಾಳಿಕೋಟಿ

ಬೆಳೆ ವಿಮೆ ಪಾವತಿಸುವಂತೆ ರೈತರ ಒತ್ತಾಯ

ಬೆಳೆ ವಿಮೆ ಪಾವತಿಸುವಂತೆ ರೈತರ ಒತ್ತಾಯ

ಒಂದು ವಾರದಲ್ಲಿ ಪಾವತಿಸದಿದ್ದರೆ ಉಗ್ರವಾದ ಹೋರಾಟದ ಎಚ್ಚರಿಕೆ 

ತಾಳಿಕೋಟೆ08: ತಾಲೂಕಿನ ಮೂಕಿಹಾಳ ಗ್ರಾಮ ಪಂಚಾಯತ ವ್ಯಾಪ್ತಿಯ 7 ಹಳ್ಳಿಗಳ ರೈತರಿಗೆ ಬೆಳೆ ವಿಮೆ ಹಣ ಪಾವತಿಯಾಗದಿರುವದನ್ನು ಖಂಡಿಸಿ 7 ಗ್ರಾಮಗಳ ರೈತರು ತಹಶೀಲ್ದಾರ ಮೂಲಕ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಮನವಿಯನ್ನು ಸಲ್ಲಿಸಿದರು. 

ಮೂಕಿಹಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಕಲ್ಲದೇವನಹಳ್ಳಿ, ನಾಗೂರ, ಮೂಕಿಹಾಳ, ಹರನಾಳ, ಹಡಗಿನಾಳ, ಹಗರಗುಂಡ, ಶಿವಪೂರ ಗ್ರಾಮಗಳ ರೈತರಿಗೆ 2021-22 ನೇ ಸಾಲಿನ ಮುಂಗಾರು ಅವಧಿಯ ತೊಗರಿ ಬೆಳೆ ಹಾಳಾಗಿದ್ದರೂ ಸಹಿತ ಬೆಳೆ ವಿಮೆ ಹಣ ಪಾವತಿಯಾಗಿಲ್ಲ. ಉತ್ತಮ ತೊಗರಿ ಬೆಳೆ ನೀರಿಕ್ಷೆಯಲ್ಲಿ ರೈತರು ಹೆಚ್ಚಿನ ಪ್ರದೇಶದಲ್ಲಿ ತೊಗರಿಯನ್ನು ಬಿತ್ತನೆ ಮಾಡಲಾಗಿತ್ತು. ಆದರೆ ತೊಗರಿ ಹೂವು ಬಿಟ್ಟು ಕಾಯಿ ಬಿಡುವ ಹಂತದಲ್ಲಿ ಮಂಜಿನಿಂದ ಕೂಡಿದ ಮಳೆಯಿಂದಾಗಿ ತೊಗರಿ ಬೆಳೆ ಕಾಳು ಸರಿಯಾಗಿ ಆಗಿಲ್ಲ. ಮಂಜಿನಿಂದಾಗಿ ಸರಿಯಾದ ಫಸಲು ಬಂದಿಲ್ಲ. ಮಂಜಿನಿಂದಾಗಿ ಬೆಳೆ ಹಾಳಾಗಿದ್ದರೂ ಸಹಿತ ವಿಮಾ ಕಂಪನಿಯವರು ಬೆಳೆ ಹಾಳಾಗಿಲ್ಲ ಎಂದು ತೋರಿಸಿದ್ದು ನಿಜಕ್ಕೂ ರೈತರಿಗೆ ಬರಸಿಡಿಲು ಬಡಿದಂತಾಗಿದೆ. ಬೆಳೆ ನಷ್ಟವಾದರೆ ರೈತರ ಸಹಾಯಕ್ಕೆ ಬರುತ್ತದೆ ಎಂದು ಸಾವಿರಾರು ರೈತರು ಬೆಳೆ ವಿಮೆ ಕಂತನ್ನು ತುಂಬಿದ್ದಾರೆ. ಆದರೆ ಬೆಳೆ ವಿಮೆ ಕಂಪನಿಯವರು ರೈತರ ಸಹಾಯಕ್ಕೆ ಬಂದಿಲ್ಲ. ನಮ್ಮದೇ ಅಕ್ಕಪಕ್ಕದ ಗ್ರಾಮಗಳ ರೈತರಿಗೆ ಬೆಳೆ ವಿಮೆ ಬಂದಿದೆ. ಆದರೆ ನಮಗೆ ಬಂದಿಲ್ಲ. ತೊಗರಿ ಬೆಳೆ ಸರಿಯಾಗಿ ಬೆಳೆಯದಿದ್ದರಿಂದ ರೈತರು ನಷ್ಟದಲ್ಲಿದ್ದು ಸಾಲದ ಸೂಲದಲ್ಲಿ ಸಿಲುಕಿದ್ದಾರೆ. ಸಾಲದಿಂದ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕೂಡಲೇ ಸರಕಾರ ಎಚ್ಚೆತ್ತುಕೊಂಡು ಮೂಕಿಹಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಹಳ್ಳಿಗಳ ರೈತರಿಗೆ ಬೆಳೆ ವಿಮೆ ಬಿಡುಗಡೆಗೊಸಬೇಕು. ಇಲ್ಲಿದ್ದರೆ 8 ದಿನಗಳ ನಂತರ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಈ ಸಂದರ್ಭದಲ್ಲಿ ರೈತರಾದ ಶಿವರಾಜ ನಾಗೂರ, ಮಂಜುನಾಥ ಶೇಟ್ಟಿ, ರುದ್ರಗೌಡ ಬಿರಾದಾರ, ಶಾಂತಗೌಡ ಗಬಸಾವಳಗಿ, ಡಿ.ಕೆ.ಗತ್ತರಗಿ, ಭೀಮರಾಯ ಸಾಲವಾಡಗಿ, ಶರಣಪ್ಪ ಕುಂಬಾರ, ಸಿದ್ದು ಮೇಲ್ದಾಪೂರ, ಮಹಾದೇವಪ್ಪ ನಡಕೂರ, ಮುತ್ತಪ್ಪ ಮೂಕಿಹಾಳ, ಸಿದ್ದಪ್ಪ ಮೂಕಿಹಾಳ, ರಾಜಕುಮಾರ ತಳವಾರ, ಶಿವಪ್ಪ ಗೋನಾಳ, ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ