ರೈತರು ಎಫ್ಐಡಿ ಮಾಡಿಕೊಳ್ಳಲು ಯಾವುದೇ ರೀತಿಯ ಹಣವನ್ನು ಕೊಡುವ ಅಗತ್ಯವಿಲ್ಲ: ಉಪ ಕೃಷಿ ನಿರ್ದೇಶಕರು
ರಾಣೇಬೆನ್ನೂರು 28: ಕರ್ನಾಟಕ ಸರ್ಕಾರವು ಕೃಷಿ ಕಾಯಕಯೋಗಿಗಳಿಗಾಗಿ ಅನೇಕ ರೀತಿಯಲ್ಲಿ ಆರ್ಥಿಕ ಅಭಿವೃದ್ಧಿ ಪರವಾದ ಯೋಜನೆಗಳನ್ನು ಜಾರಿಗೊಳಿಸಿ ರೈತ ಸಮುದಾಯಕ್ಕೆ ವಿವಿಧ ರೀತಿಯಲ್ಲಿ ಅನುಕೂಲತೆಗಳನ್ನು ಕಲ್ಪಿಸಿದೆ ಪ್ರಸ್ತುತ ಸರಕಾರದ ಇಲಾಖೆಯ ಆದೇಶಾನುಸಾರ ರೈತರು ಎಫ್ ಐ ಡಿ ಮಾಡಿಸಿಕೊಳ್ಳುವುದು ಕಡ್ಡಾಯ ಮತ್ತು ಅಗತ್ಯವಾಗಿದ್ದು ಇದಕ್ಕಾಗಿ ಯಾವುದೇ ರೀತಿಯ ಹಣವನ್ನು ಕೊಡುವ ಅಗತ್ಯವಿಲ್ಲ ಎಂದು ಜಿಲ್ಲಾ ಕೃಷಿ ಉಪ ನಿರ್ದೇಶಕ ರೇವಣಸಿದ್ದಗೌಡ್ರ ಎಚ್ ಕೆ. ತಿಳಿಸಿದ್ದಾರೆ. ಈ ಕುರಿತು ನಗರದಲ್ಲಿ ಮಾಧ್ಯಮ ಪ್ರಕಟಣೆ ನೀಡಿರುವ ಅವರು ಸರಕಾರ ಹೊರಡಿಸಿರುವ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸೌಲಭ್ಯಗಳನ್ನು ಪಡೆಯಲು ರೈತರು ಸಮರ್ಕವಾಗಿ ಮಾಹಿತಿ ಪಡೆಯಬೇಕು ಮತ್ತು ಸೌಲಭ್ಯಗಳನ್ನು ಸಮರ್ಕವಾಗಿ ಪಡೆದುಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.ರಾಜ್ಯ ಕೃಷಿ ಇಲಾಖೆ ರಾಜ್ಯದ ಎಲ್ಲಾ ರೈತರ ವೈಯುಕ್ತಿಕ ಪ್ರೊಟ್ಸ್ ಐಡಿ ದಾಖಲೀಕರಣಗೊಳಿಸುತ್ತದೆ. ಇದರಿಂದಾಗಿ ಸರಕಾರದಿಂದ ಬರುವ ಎಲ್ಲಾ ಅನುಕೂಲತೆಗಳನ್ನು ಸರಳವಾಗಿ, ಕಾಲಕಾಲಕ್ಕೆ ನೇರವಾಗಿ ರೈತರ ಖಾತೆಗೆ ಜಮೆಯಾಗಲು ಇದು ಆನುಕುಲವಾಗಲಿದೆ ಎಂದು ಅವರು ವಿವರಿಸಿದ್ದಾರೆ.
ಪ್ರೊಟ್ಸ್ ಐಡಿ, (ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ) ವೆಬ್ ಆಧಾರಿತ ಸಾಫ್ಟವೇರ ವ್ಯವಸ್ಥೆಯಾಗಿದೆ. ಇದರಲ್ಲಿ ರೈತರ ಆಧಾರ, ಪಹಣಿ, ಮತ್ತು ಬ್ಯಾಂಕ್ ವಿವರಗಳನ್ನು ದಾಖಲೀಕರಣ ಮಾಡಿ ಎಫ್ ಐ ಡಿ ನೀಡಲಾಗುತ್ತದೆ. ಈಗ ಹೊಸ ಎಫ್ ಐ ಡಿ ಅಥವಾ ಅದರಲ್ಲಿರುವ ಮಾಹಿತಿಯನ್ನು ತಿದ್ದುಪಡಿ ಮಾಡಿಸಲು ರೈತರು ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಇಲಾಖಾ ಕಚೇರಿಗಳಿಗೆ ಅಥವಾ ಗ್ರಾಮ ಒನ್, ಗ್ರಾಹಕರ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಮಾಡಿಸಿಕೊಳ್ಳಬಹುದಾಗಿದೆ. ಅದಕ್ಕೂ ಮುಖ್ಯವಾಗಿ, ಪ್ರೊಟ್ಸ್ ವೆಬ್ ಸೈಟಿನಲ್ಲಿ ನಾಗರೀಕ ಲಾಗಿನ್ನಿಗೆ ಭೇಟಿ ನೀಡುವ ಮೂಲಕ ಯಾವುದೇ ಶುಲ್ಕವನ್ನು ನೀಡದೇ ಉಚಿತವಾಗಿ ತಾವೇ ತಮ್ಮ ದಾಖಲೆಗಳನ್ನು ನೋಂದಣಿ ಮಾಡಿಸಿಕೊಳ್ಳಬಹುದು, ನೋಂದಣಿ ಮಾಡಿಸಿಕೊಳ್ಳಲು ಹಾಗೂ ತಿದ್ದುಪಡಿ ಮಾಡಿಕೊಳ್ಳಲು ಸರಕಾರ ಯಾವುದೇ ಅಂತಿಮ ದಿನವನ್ನು ಸಧ್ಯದ ಸ್ಥಿತಿಯಲ್ಲಿ ನಿಗದಿಪಡಿಸಿಲ್ಲ, ಆದರೂ ರೈತರು ಆದಷ್ಟು ಬೇಗನೆ ಆಯಾ ಸಮೀಪದ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಎಫ್ ಐ ಡಿ ಹೆಸರಿನ ಎಲ್ಲಾ ಸರ್ವೆ ನಂಬರುಗಳನ್ನು ಸೇರಿಸಿಕೊಂಡಲ್ಲಿ ಇಲಾಖೆಯ ಎಲ್ಲ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದಿದ್ದಾರೆ.
ಬೆಳೆವಿಮೆ ನೋಂದಣಿಗೆ ಜುಲೈ-31-2023 ವರೆಗೆ ಅವಕಾಶವಿದ್ದು ರೈತರು ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಂಡು ಗರಿಷ್ಠ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.ಎಫ್.ಐ.ಡಿ. ನೋಂಧಣಿ ಅಥವಾ ತಿದ್ದುಪಡಿ ಕಾರ್ಯಕ್ಕೆ ರೈತ ಸಂಪರ್ಕ ಕೇಂದ್ರದಲ್ಲಿ ಹಣ ಪಡೆಯಲಾಗುತ್ತಿದೆ ಎನ್ನುವ ವರದಿಗಳು ಬಂದಿರುವುದು ಸತ್ಯಕ್ಕೆ ದೂರವಾಗಿವೆ.ಈ ಕಾರ್ಯಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಹಣ ಪಡೆಯುವ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಸಂಭಂದಪಟ್ಟ ಕೃಷಿ ಅಧಿಕಾರಿಗಳ ಗಮನಕ್ಕೆ ತರಲು ಮುಂದಾಗಬೇಕು ಎಂದು ರಾಣೇಬೆನ್ನೂರು ಸಹಾಯಕ ಕೃಷಿ ನಿರ್ದೇಶಕರು, ರೈತ ಸಮುದಾಯಕ್ಕೆ ಕೋರಿದ್ದಾರೆ.