ರಾಣೆಬೆನ್ನೂರ

ಬ್ಯಾಂಕಿನವರ ಒಳಸಂಚಿಗೆ ರೈತರು ಕಷ್ಟಪಡುವಂತಾಗಿದೆ: ಹಿರೇಮಠ

ಬ್ಯಾಂಕಿನವರ ಒಳಸಂಚಿಗೆ ರೈತರು ಕಷ್ಟಪಡುವಂತಾಗಿದೆ: ಹಿರೇಮಠ

ರಾಣೇಬೆನ್ನೂರು 19: ಸಾಲ ಮನ್ನಾ ಹಣ ರೈತರ ಖಾತೆಗಳಿಗೆ ಜಮೆ ಮಾಡಲು ವಿಳಂಭ ಧೋರಣೆ ಅನುಸರಿಸುತ್ತಿರುವುದಾಗಿ ಆರೋಪಿಸಿ ನಮ್ಮ ಭೂಮಿ, ನಮ್ಮ ಜೀವ ರೈತಪರ ಹೋರಾಟ ಸಮಿತಿಯ ನೂರಾರು ರೈತರು ಮತ್ತು ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳ ರೈತರು ಇಲ್ಲಿನ ಎಪಿಎಂಸಿ ರಸ್ತೆಯಲ್ಲಿರುವ ಇಂಡಿಯನ್ ಬ್ಯಾಂಕ್ ಶಾಖಾ ಕಚೇರಿ ಆವರಣದಲ್ಲಿ ಧರಣಿ ನಡೆಸಿ, ಬ್ಯಾಂಕ್ ವ್ಯವಸ್ಥಾಪಕರ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ಹಾಗೂ ನ್ಯಾಯವಾದಿ ಎಸ್.ಡಿ.ಹಿರೇಮಠ ಅವರು, ಇದುವರೆಗೂ ರೈತರ ಸಾಲ ಮನ್ನಾ ಹಣ ಜಮೆ ಮಾಡದೆ ರೈತರ ಜೀವನದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಈ ಕುರಿತಂತೆ ಹಲವು ಬಾರಿ ಧರಣಿ, ಹೋರಾಟ, ಪ್ರತಿಭಟನೆ ನಡೆಸಿದಾಗಲೊಮ್ಮೆ ವಿವಿಧ ಕಾರಣಗಳನ್ನು ನೀಡಿ ಸಾಗ ಹಾಕುವ ಈ ಅಧಿಕಾರಿಗಳು ಅಂತಿಮವಾಗಿ ತಹಸೀಲ್ದಾರ ಕಚೇರಿಯಲ್ಲಿ ಸಭೆ ನಡೆದು ಅಂದು ಫೆ16. 2021ರಂದು ಉಪಸ್ಥಿತರಿದ್ದ ರೈತರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಏ.15ರೊಳಗಾಗಿ ರೈತರ ಖಾತೆಗಳಿಗೆ ಹಣ ಜಮೆ ಮಾಡುವುದಾಗಿ ಬರಹದ ಮೂಲಕ ಭರವಸೆ ನೀಡಿದ್ದರು ಎಂದರು.

ಪ್ರಸ್ತುತ ಇಲ್ಲಿಯವರೆಗೂ ಈ ಬ್ಯಾಂಕಿನ ವ್ಯವಸ್ಥಾಪಕರು ಹಣ ಹಾಕದೆ ಯಾವುದೇ ವಿಷಯವನ್ನು ತಿಳಿಸದೆ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಇಂದು ಬ್ಯಾಂಕಿಗೆ ಬಂದು ಕೇಳಿದರೆ ತಮಗೆ ಸಂಬಂಧವಿಲ್ಲ. ಜಿಲ್ಲಾಧಿಕಾರಿಗಳ ಗಮನಕ್ಕೆ ತನ್ನಿ, ಅವರ ಆದೇಶ ಮಾರ್ಗದರ್ಶನದಂತೆ ತಾವು ನಡೆದುಕೊಳ್ಳುತ್ತಿವೆ.   ಇಂತಹ ಸಂದರ್ಭದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಾ ಉಸುರವಳ್ಳಿಯಂತೆ ಬಣ್ಣ ಬದಲಾಯಿಸುವುದು ಸರಿಯಲ್ಲ ಎಂದು ಕಿಡಿ ಕಾರಿದ ಅವರು, ಯಾವುದೇ ಕಾರಣಕ್ಕೂ ಪರಿಹಾರದ ಹಣ ಜಮೆ ಆಗುವವರೆಗೂ ರೈತರು ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಬಿಗಿಪಟ್ಟು ಸಡಿಲಿಸದೆ ಧರಣಿ ಮುಂದುವರಿಸಿದ್ದರು.

ಧರಣಿ ನಿರತರ ಹೋರಾಟ ತೀವ್ರವಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಿಪಿಐ ಎಂ.ಐ.ಗೌಡಪ್ಪಗೌಡ್ರ, ಪಿಎಸ್‍ಐ ಪ್ರಭು ಮತ್ತು ಪೊಲೀಸ್ ಸಿಬ್ಬಂದಿ ಪ್ರತಿಭಟನಾ ನಿರತರನ್ನು ಮನವೊಲಿಸಲು ಪ್ರಯತ್ನಿಸಿದರಾದರೂ ಕೋವಿಡ್ ನಿಯಮಾವಳಿ ಮತ್ತು ಸರಕಾರದ ಆದೇಶದಂತೆ ಸಾರ್ವಜನಿಕವಾಗಿ ಯಾವುದೇ ಧರಣಿ, ಪ್ರತಿಭಟನೆ ನಡೆಸುವಂತಿಲ್ಲ. ಹೀಗಾಗಿ ತಾವು ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಇಂದೇ ಸ್ಥಳ ಬಿಟ್ಟು ತಮ್ಮ ತಮ್ಮ ಗ್ರಾಮಗಳಿಗೆ ತೆರಳಬೇಕೆಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ರೈತರು ಪರಿಹಾರ ಸಿಗುವವರೆಗೂ ತಾವು ಇಲ್ಲಿಂದ ತೆರಳುವುದಿಲ್ಲ ಎಂದು ಬಿಗಿಪಟ್ಟು ಸಡಿಲಿಸದೆ ಮುಂದುವರಿದಿದ್ದರು. ಅಂತಿಮವಾಗಿ ಎಸ್.ಡಿ.ಹಿರೇಮಠ ಮತ್ತು ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಬ್ಯಾಂಕಿನ ವ್ಯವಸ್ಥಾಪಕರೊಂದಿಗೆ ಸಮಾಲೋಚನೆ ನಡೆಸಿ ಮೇಲಾಧಿಕಾರಿಗಳ ಆದೇಶದಂತೆ ತಾವು ಕ್ರಮ ಕೈಗೊಳ್ಳುವುದಾಗಿ ವ್ಯವಸ್ಥಾಪಕ ವೆಂಕಟೇಶ ಅವರು ಭರವಸೆ ನೀಡಿದರು.

ಮಲ್ಲಿಕಾರ್ಜುನ ಹಲಗೇರಿ, ಹನುಮಂತಪ್ಪ ಕಬ್ಬಾರ, ದಿಳ್ಳೆಪ್ಪ ಸತ್ಯಪ್ಪನವರ, ಬಸವರಾಜ ಕೊಂಗಿ, ರಾಮಪ್ಪ ಸುಂಕಾಪುರ, ಕುಬೇರಪ್ಪ ಹುಲಿಹಳ್ಳಿ, ಬೀರೇಶ್ ಪೂಜಾರ, ಸಂಜೀವರಡ್ಡಿ ಹುಲಿಹಳ್ಳಿ, ಕಿರಣ ಪೂಜಾರ, ಹೇಮಪ್ಪ ಸುಂಕಾಪುರ, ವೆಂಕನಗೌಡ ಜೀವನಗೌಡ್ರ, ಲಿಂಗರಡ್ಡಿ, ನಾಗೇಂದ್ರಪ್ಪ ಪೂಜಾರ, ವೆಂಕಪ್ಪ ವಡೇರಹಳ್ಳಿ, ಗೋವಿಂದಪ್ಪ ಸುಂಕಾಪುರ, ರಾಮಚಂದ್ರಪ್ಪ ಯರೇಶೀಮಿ, ಮಂಜಪ್ಪ ಕುಪ್ಪೇಲೂರ, ಶಿವಪ್ಪ ಗಂಗಣ್ಣನವರ, ಬಸನಗೌಡ ಹುಲ್ಲತ್ತಿ, ಚನ್ನಬಸನಗೌಡ ಕರೇಗೌಡ್ರ, ಬೀರೇಶಪ್ಪ ಕರೇಗೌಡ್ರ, ಕೃಷ್ಣೇಗೌಡ ಜೀವನಗೌಡ್ರ, ಲಚ್ಚೆಪ್ಪ ಸುಂಕಾಪುರ, ನಾಗರಾಜ ವಜೀಗೌಡ್ರ, ಮಹಾಂತೇಶ ಮಾವಿನತೋಪ, ಬಂಗಾರಿ ನಾಗರಾಜ, ಶೇಖಪ್ಪ ಕದರಮಂಡಲಗಿ, ಗದಿಗೆಪ್ಪ ಮುದಿಗೌಡ್ರ, ಶಿದ್ದಪ್ಪ ಮಾಕನೂರ, ಚನ್ನಪ್ಪ ಹೊಸಗೌಡ್ರ, ನಾಗಪ್ಪ ಹಳ್ಳಳ್ಳಿ, ಬೀರಪ್ಪ ಬಾನುವಳ್ಳಿ, ಚಾಂದುಸಾಬ ದೊಡ್ಡಮನಿ ಸೇರಿದಂತೆ ಹಲಗೇರಿ, ನಂದಿಹಳ್ಳಿ, ಅಂತರವಳ್ಳಿ, ಲಿಂಗದೇವರಕೊಪ್ಪ, ಹಾರೋಗೊಪ್ಪ ಮತ್ತಿತರೆ ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

2019ರ ಜೂನ್ ತಿಂಗಳಲ್ಲಿ ರೈತರಿಗೆ 9.5 ಕೋಟಿ ಸಾಲ ಮನ್ನಾ ಹಣ ಬ್ಯಾಂಕಿಗೆ ಬಂದಿದೆ. ಆದರೆ, ಖಾತೆಗೆ ಜಮೆ ಮಾಡದೆ ಸಸ್ಪೆನ್ಸ್ ಅಕೌಂಟ್‍ನಲ್ಲಿ ಇಟ್ಟುಕೊಂಡಿದ್ದಾರೆ. ಇದರಿಂದ ರೈತರು ಸಾಲ ಮನ್ನಾ ಯೋಜನೆಯಿಂದ ವಂಚಿತರಾಗಿದ್ದಾರೆ. ಈಗ ಬಡ್ಡಿ ಸಹಿತ ರೈತರ ಖಾತೆಗೆ ಜಮೆ ಮಾಡಬೇಕೆಂದು ಬ್ಯಾಂಕ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕಿನ ವಲಯ ವ್ಯವಸ್ಥಾಪಕರು ಒಪ್ಪಿಕೊಂಡು ಲಿಖಿತ ಪತ್ರ ನೀಡಿದ್ದರು. ಆದರೆ, ನೀಡಿರುವ ಭರವಸೆಯಂತೆ ಈಡೇರಿಸದೆ ಮೀನಾಮೇಷ ಎಣಿಸುತ್ತ ರೈತರಿಗೆ ವಂಚಿಸುತ್ತಿದ್ದಾರೆ.

-ಎಸ್.ಡಿ.ಹಿರೇಮಠ,

ಜಿಲ್ಲಾಧ್ಯಕ್ಷರು

 ಸರಕಾರವು ನಿಯಮಾವಳಿಯನ್ವಯ ಯಾವುದೇ ಧರಣಿ, ಪ್ರತಿಭಟನೆ, ಹೋರಾಟ, ಮೆರವಣಿಗೆ ಮತ್ತಿತರೆ ಜನಸಂದಣಿಯ ಕಾರ್ಯಕ್ರಮಗಳು ನಡೆಸಲು ಅವಕಾಶವಿಲ್ಲ. ಆದರೂ ಮನವಿ ಕೊಡುತ್ತಾರೆನ್ನುವ ಉದ್ದೇಶದಿಂದ ಅವಕಾಶ ನೀಡಿದ್ದೆವು. ಸರಕಾರದ ನಿರ್ದೇಶನದಂತೆ ತಮ್ಮ ಧರಣಿ ವಾಪಾಸ್ ಪಡೆದಿದ್ದಾರೆ.

– ಎಂ.ಬಿ.ಗೌಡಪ್ಪಗೌಡ್ರ,

ಸಿಪಿಐ, 



ಸುದ್ದಿ ಓದಿ