ತಾಳಿಕೋಟಿ

ಅತಿಕ್ರಮಣ ರಸ್ತೆ ತೆರುವುಗೊಳಿಸುವಂತೆ ರೈತರ ಪ್ರತಿಭಟನೆ

ಅತಿಕ್ರಮಣ ರಸ್ತೆ ತೆರುವುಗೊಳಿಸುವಂತೆ ರೈತರ ಪ್ರತಿಭಟನೆ


ತಾಳಿಕೋಟೆ 10: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಹತ್ತಿರ ನಿರ್ಮಾಣವಾಗುತ್ತಿರುವ ಸೋಲಾರ್ ಪ್ಲಾಂಟ್‌ದವರು ರಸ್ತೆ ಅತಿಕ್ರಮಣ ಮಾಡಿಕೊಂಡಿರುವದರಿಂದ ಸುಮಾರು ಮೂವತ್ತಕ್ಕೂ ಹೆಚ್ಚು ರೈತರಿಗೆ ರಸ್ತೆ ಇಲ್ಲದಾಗಿದ್ದು, ರೈತರ ಹೊಲಗಳಿಗೆ ಹೋಗುವ ರಸ್ತೆ ಅತಿಕ್ರಮಣ ತಡೆಯಬೇಕು ಎಂದು ಸೋಲಾರ್ ಘಟಕದಿಂದ ಬಾಧಿತ ರೈತರು ಸೋಲಾರ್ ಘಟಕದ ಮುಖ್ಯ ದ್ವಾರದ ಬಳಿ ಗುರವಾರ ಸಾಂಕೇತಿಕವಾಗಿ ಪ್ರತಿಭಟನೆಯನ್ನು ನಡೆಸಿದರು. 

ಬೊಮ್ಮನಹಳ್ಳಿ ಹಾಗೂ ತಾಳಿಕೋಟೆ ಸಿಮಿಗೆ ಹೊಂದಿಕೊಂಡಿರುವಂತೆ ಫೋರ್ತ್‌ ಪಾರ್ಟನರ್ ಎನರ್ಜಿ ಪ್ರೈವೆಟ್  ಲಿಮಿಟೆಡ್ ಕಂಪನಿಯು ಸೌರ ವಿದ್ಯುತ್ ಘಕಟಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಹಲವು ರೈತರು ಜಮೀನುಗಳನ್ನು ಲೀಜ್‌ಗೆ ಕೊಟ್ಟಿದ್ದಾರೆ. ಅಕ್ಕಪಕ್ಕದವರು ಜಮೀನು ಕೊಟ್ಟಿರುವುದರಿಂದ ಕಂಪನಿಯವರು ಜಮೀನುಗಳ ಸುತ್ತಲೂ ಸಿಮೆಂಟ್ ಕಂಬವನ್ನು ಹಾಕಿ ರಸ್ತೆಯನ್ನು ಬಂದ್ ಮಾಡಿದ್ದಾರೆ.  ಇದರಿಂದ ನಮ್ಮ ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆ ಮಾಡಲು ಅನಾನುಕೂಲವಾಗಿದೆ. ಅಲ್ಲದೇ ನಮಗೆ ಹಾದು ಹೋಗಲು ದಾರಿಯೇ ಇಲ್ಲವಾಗಿದೆ. ಶತಮಾನಗಳಿಂದಲೂ ನಾವು ಲೀಜ್ ಕೊಟ್ಟ ಜಮೀನಿನಲ್ಲಿ ಹಾದು ಹೋಗುತ್ತಿದ್ದೇವೆ. ಸೌರ ವಿದ್ಯುತ್ ಕಂಪನಿಯವರು ಸೀಮೆಂಟ ಕಂಬಗಳನ್ನ ಹಾಕಿರುವದರಿಂದ ಜಮೀನುಗಳಿಗೆ ಹೋಗಲು ತೊಂದರೆಯಾಗುತ್ತಿದೆ. ನಮಗೆ ಹೋಗಿ ಬರಲು ಉದ್ದೇಶ ಪೂರ್ವಕವಾಗಿ ತೊಂದರೆ ಕೊಟ್ಟು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಲೀಜಗೆ ಕೊಟ್ಟ ಹೊಲಗಳ ಬದುವನ್ನು ಸಮತಟ್ಟು ಮಾಡಿದ್ದಾರೆ. ಆ ಹೊಲದ ನೀರು ಕೆಳಗೆ ಇರುವ ನಮ್ಮ ಹೊಲಗಳಿಗೆ ಬಂದು ಜಮೀನು ಹಾಳಾಗುತ್ತವೆ. ಕೂಡಲೇ ಲೀಜ್‌ಗೆ ಕೊಟ್ಟ ಹೊಲದ ಬದುವನ್ನು ನಿರ್ಮಿಸಿ ಕೊಟ್ಟು ಮುಂದಿರುವ ಜಮೀನುಗಳಿಗೆ ನೀರು ಬರದ ಹಾಗೆ ಬದುವನ್ನು ಹೊರಗೆ ಮಾಡಿ ಸಿಮೇಂಟ್ ಕಂಬಗಳನ್ನ ಹಾಕಬೇಕು. ಉದ್ದೇಶ ಪೂರ್ವಕವಾಗಿ ನಮ್ಮ ಜಮೀನಿನ ಬದುವಿನಲ್ಲಿರುವ ಗಿಡಮರಗಳನ್ನು ನಾಶ ಮಾಡಿದ್ದು ಅದಕ್ಕೆ ಸೂಕ್ತ ಪರಿಹಾರ ಕಂಪನಿಯವರು ನೀಡಬೇಕು. ಅಲ್ಲದೇ ಫೋರ್ತ್‌ ಪಾರ್ಟನರ್ ಎನರ್ಜಿ ಪ್ರೈವೆಟ್ ಲಿಮಿಟೆಡ್ ಕಂಪನಿಯ ಸೌರ ವಿದ್ಯುತ್ ಕಂಪನಿಯವರು ನಡೆಸುತ್ತಿರುವ  ಕಾಮಗಾರಿಗೆ ಕೋರ್ಟ ತಡೆಯಾಜ್ಞೆ ಇದ್ದರೂ ಆದೇಶವನ್ನು ಧಿಕ್ಕರಿಸಿ ಸದರಿ ಕಂಪನಿಯವರು ಕಾಮಗಾರಿ ಮುಂದುವರೆಸುತ್ತಿದ್ದಾರೆ ಎಂದು ರೈತರು ಆರೋಪಿಸಿ ಪ್ರತಿಭಟನೆ ನಡೆಸಿದರು. 

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸೋಲಾರ್ ಕಂಪನಿಯ ಸೂಪರ್‌ವೈಸರ್ ಶ್ರೀನಿವಾಸ್, ರೈತರ ಜಮೀನುಗಳಿಗೆ ತೆರಳಲು ಎರಡು ಕಡೆಗೆ ರಸ್ತೆ ಬಿಡುತ್ತೇವೆ ಎಂದು ಒಪ್ಪಿದ್ದೇವೆ. ಆದರೆ ಸದ್ಯಕ್ಕೆ ವಿಷಯ ಕೋರ್ಟ್‌ಗೆ ಹೋಗಿರುವುದರಿಂದ ಮತ್ತೊಮ್ಮೆ ನಮ್ಮ ಕಂಪನಿಯ ಮೇಲಾಧಿಕಾರಿಗಳನ್ನು ಕರೆಯಿಸಿ ಅಧಿಕಾರಿಗಳು, ಜಮೀನು ಲೀಸ್ ಕೊಟ್ಟ ರೈತರು ಹಾಗೂ ಜಮೀನಿಗೆ ಹೋಗುವ ರೈತರನ್ನು ಕರೆದು ಸಭೆ ನಡೆಸುತ್ತೇವೆ. ಒಂದು ವಾರ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ರೈತರು ಒಂದು ವಾರದಲ್ಲಿ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ತಹಸೀಲ್ದಾರ್ ಕಛೇರಿ ಎದುರಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ ಪ್ರತಿಭಟನೆಯನ್ನು ಕೈಬಿಟ್ಟರು. 

ಈ ಸಂದರ್ಭದಲ್ಲಿ ಬೊಮ್ಮನಳ್ಳಿ ರೈತ ಹಿತರಕ್ಷಣಾ ಸಮಿತಿ ಸಂಚಾಲಕ ಬಸವರಾಜ ಮಸರಕಲ್ಲ, ರೈತ ಪ್ರಮುಖ ಶಂಕರಗೌಡ ಪಾಟೀಲ, ಶಾಂತಪ್ಪ ದೋರನಳ್ಳಿ, ರೈತರಾದ ತಿಮ್ಮಣ್ಣ ಮಸರಕಲ್ಲ, ರವೀಂದ್ರ ಮಸರಕಲ್ಲ, ರಮೇಶ ಮಸರಕಲ್ಲ, ಬಸವರಾಜ ಮಾಗಣಗೇರಿ, ಶಾಂತಪ್ಪ ದ್ವಾರನಳ್ಳಿ, ವೆಂಕಪ್ಪ ದ್ವಾರನಹಳ್ಳಿ, ಹರಿಶ್ಚಂದ್ರ ಮಸರಕಲ್ಲ, ಬಸಪ್ಪ ಹುನಗುಂದ, ಸುರೇಶ ಹುನಗುಂದ, ಭೀಮಣ್ಣ ಕದ್ದೇನಹಳ್ಳಿ, ಪರಶುರಾಮ ಕದ್ದೇನಹಳ್ಳಿ ಮೊದಲಾದವರು ಇದ್ದರು. 


ಸುದ್ದಿ ಓದಿ