ಕಾರವಾರ

ಪೇಚಿಗಿಡಾದ ಅನಾನಸ್ ಬೆಳೆದ ರೈತ

ಪೇಚಿಗಿಡಾದ ಅನಾನಸ್ ಬೆಳೆದ ರೈತ

ಬನವಾಸಿ 24: ಕೊರೋನಾ ತನ್ನ ಪ್ರಭಾವ ಹೆಚ್ಚಿಸುತ್ತಿದ್ದಂತೆಯೇ ಬನವಾಸಿಯ ಅನಾನಸು ಬೆಳೆದ ರೈತರೂ ಪೇಚಿಗೆ ಬೀಳುತ್ತಿದ್ದಾರೆ. ಬೆಳೆದ ಅನಾನಸ್‍ನ್ನು ರೈತರು ಕಡಿಮೆ ದರದಲ್ಲಿ ಮಾರಲು ಮುಂದಾದರೂ, ಕೊಳ್ಳುವವರ ಕೊರತೆ ಉಂಟಾಗುತ್ತಿದೆ.

ಬನವಾಸಿಯ ಅನಾನಸ್ ಗುಣಮಟ್ಟದಲ್ಲಿ ರಾಜ್ಯದಲ್ಲಿಯೇ ಹೆಸರು ಪಡೆದಿದೆ. ಇಲ್ಲಿ ಬೆಳೆಯುವ ಅನಾನಸ್ ಹಣ್ಣು ರುಚಿ ಮತ್ತು ಸಿಹಿಯಲ್ಲಿ ಪ್ರಸಿದ್ದಿ ಹೊಂದಿದೆ. ಕೆಲವೇ ಜನರು ಬೆಳೆಯುತ್ತಿದ್ದ ಅನಾನಸನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಉತ್ತೇಜಿಸಿ ರಾಜ್ಯಕ್ಕೆ ಪರಿಚಯಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ದಿ. ರಾಮಕೃಣ್ಣ ಹೆಗಡೆ ಅವರಿಗೆ ಸಲ್ಲುತ್ತದೆ. ಇಲ್ಲಿಯ ಭಾಶಿ, ಮೊಗವಳ್ಳಿ, ಬಂಕಸಾಣ, ಯಡಿಯೂರಬೈಲ್ ಭಾಗದಲ್ಲಿ ರೈತರಿಗೆ ಅನಾನಸ್ ಬೆಳೆಯಲು ಅವರು ಪ್ರೋತ್ಸಾಹ ನೀಡಿದ್ದರು. ಇಲ್ಲಿಯ ಗೋಳಿಕಟ್ಟಾದಲ್ಲಿ ಕಾಮಧೇನು ಸಂಘ ( ಕಾಮ್ಕೊ) ಸ್ಥಾಪನೆ ಮೂಲಕ ಅನಾನಸ್ ಹಣ್ಣುಗಳನ್ನು ಸಂಸ್ಕರಿಸಿ ಹೊರ ಮಾರುಕಟ್ಟೆಗೆ ಕಳಿಸುವ ಕಾರ್ಯ ಅವರ ಅವಧಿಯಲ್ಲಾಗಿತ್ತು.

ಕಾಮ್ಕೊ ಸಂಸ್ಥೆ ವಿವಿಧ ತೊಡಕುಗಳನ್ನು ಎದುರಿಸಿದೆಯಾದರೂ, ಬನವಾಸಿ ಭಾಗದ ರೈತರಿಗೆ ಅನಾನಸ್ ಹಣ್ಣು ಜೀವನ ಕಟ್ಟಿಕೊಟ್ಟಿದೆ. ಹಲವು ವ್ಯಾಪಾರಸ್ಥರು ಇಲ್ಲಿಯ ರೈತರಿಂದ ಅನಾನಸ್ ಖರೀದಿಸಿ ಹೊರ ಮಾರುಕಟ್ಟೆಗೆ ಕಳಿಸುತ್ತಿದ್ದರು. ನಂತರದ ವರ್ಷಗಳಲ್ಲಿ ಇಲ್ಲಿಯೇ ಅನಾನಸ್ ಸಂಸ್ಕರಿಸುವ ಫ್ಯಾಕ್ಟರಿಗಳು ತಲೆ ಎತ್ತಿವೆ. ರೈತರು ನಾಟಿ ಮಾಡಿದ ಅವಧಿ ಆಧರಿಸಿ ಡಿಸೆಂಬರ್ ನಿಂದ ಏಪ್ರಿಲ್ ಮಧ್ಯ ಭಾಗದವರೆಗೆ ಅನಾನಸ್ ಬೆಳೆ ಕಟಾವಿಗೆ ಬರುತ್ತದೆ. ಅನಾನಸ್ ಸಂಸ್ಕರಣಾ ಘಟಕಗಳು ರೈತರಿಂದ ಗುಣಮಟ್ಟದ ಕಾಯಿಗಳನ್ನು ಖರೀದಿಸುತ್ತವೆ. ಶೇ.75 ರಷ್ಟು ಬೆಳೆ ಸಂಸ್ಕರಣಾ ಘಟಕಗಳಿಂದ ಖರೀದಿ ಆದರೆ, ಇನ್ನುಳಿದವನ್ನು ಸ್ಥಳೀಯ ವ್ಯಾಪಾರಸ್ಥರು ಖರೀದಿಸಿ ಬನವಾಸಿಗೆ ಆಗಮಿಸುವ ಪ್ರವಾಸಿಗರಿಗೆ ಮಾರಾಟ ಮಾಡುತ್ತಾರೆ. ಸ್ಥಳದಲ್ಲಿಯೇ ಹಣ್ಣಿನ ಸಿಪ್ಪೆ ತೆಗೆದು ಮಸಾಲೆ ಹಾಕಿ ಮಾರಾಟ ಮಾಡುವ ಮೂಲಕ ತಮ್ಮ ಜೀವನ ಕಂಡುಕೊಂಡಿದ್ದಾರೆ. ಇದರಿಂದಾಗಿ ಬನವಾಸಿಯ ದೇಗುಲದ ಸೌಂದರ್ಯ ವೀಕ್ಷಿಸಿದ ಪ್ರವಾಸಿಗರು, ಬನವಾಸಿಯ ಅನಾನಸ್ ರುಚಿಯನ್ನೂ ಸವಿದು ಹೋಗುತ್ತಿದ್ದರು.

 ಕೋವಿಡ್ ಬಳಿಕ ಅನಾನಸ್ ಬೆಳೆಗಾರರ ಬದುಕು ದುಸ್ತರವಾಗಿದೆ. 20-22 ರೂ. ಪ್ರತಿ ಕೆಜಿಗೆ ದರ ಲಭಿಸುತ್ತಿದ್ದ ಅನಾನಸ್ ಕಳೆದ ವರ್ಷ ಕೇಳುವವರಿಲ್ಲದೇ ಹಾಳಾಗಿತ್ತು. ಈ ವರ್ಷ ಡಿಸೆಂಬರ್ ಜನವರಿ ತಿಂಗಳ ವೇಳೆ ಅನಾನಸ್ ಖರೀದಿಸಲಾಗುತ್ತಿತ್ತಾದರೂ ದರ  ಕೆಜಿಗೆ 14-15 ರೂ.ಗೆ ಇಳಿದಿತ್ತು. ರೈತರೂ ಅನಿವಾರ್ಯವಾಗಿ ಈ ದರದಲ್ಲಿ ಬೆಳೆ ಮಾರಾಟ ಮಾಡಿ, ಮಾರ್ಚ್  ವೇಳೆಗಾದರೂ ದರ ಬರಬಹುದು ಎಂದು ನಿರೀಕ್ಷೆಯಲ್ಲಿದ್ದರು. ಆದರೆ, ಪ್ರತಿ ಕೆಜಿಗೆ 10 ರೂ.ಗೆ ಇಳಿದಿದೆ.

ಮಾರ್ಚ್ ತಿಂಗಳ ಈ ವೇಳೆ ಅನಾನಸ್ ಕಟಾವು ಭಾಗಶಃ ಮುಕ್ತಾಯದ ಹಂತಕ್ಕೆ ಬಂದಿರುತ್ತಿತ್ತು. ಆದರೆ, ಈ ವರ್ಷ ರೈತರು ದರಕ್ಕಾಗಿ ಕಾಯುತ್ತಿದ್ದು, ಈಗ ಕಟಾವು ಮಾಡಿ ಮಾರಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಬನವಾಸಿ ದೇಗುಲ ಮತ್ತು ಸುತ್ತಮುತ್ತಲಿನ ಸಣ್ಣ ವ್ಯಾಪಾರಸ್ಥರೂ ಈಗ ಅನಾನಸ್ ಪೇಚಿಗೆ ಸಿಲುಕಿಕೊಂಡಿದ್ದಾರೆ. ರೈತರಿಂದ ಖರೀದಿಸಿ ದೇಗುಲದ ಎದುರಿನಲ್ಲಿ ಮಾರಾಟಕ್ಕೆ ಕುಳಿತರೂ ಕೊಳ್ಳುವವರಿಲ್ಲದಂತಾಗಿದೆ. ಕೋವಿಡ್ ಎರಡನೇ ಹಂತದ ಅಲೆ ಕಾರಣದಿಂದಾಗಿ ಒಂದೆಡೆ ಪ್ರವಾಸಿಗರ ಸಂಖ್ಯೆಯೂ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಇನ್ನೊಂದೆಡೆ, ಬಂದ ಪ್ರವಾಸಿಗರೂ ಸಹ ಹೊರಗಡೆ ತಿಂಡಿ, ವಸ್ತುಗಳನ್ನು ಖರೀದಿಸದ ಕಾರಣ ಖರೀದಿಸಿ ತಂದ ಹಣ್ಣುಗಳೂ ಕೊಳೆಯತೊಡಗಿವೆ.

ಪ್ರವಾಸಿಗರು ಇಲ್ಲಿಯ ಅನಾನಸ್ ರುಚಿ ಸವಿದು ಹೋಗುತ್ತಿದ್ದರು. ಈಗ ಕೋವಿಡ್ ಕಾರಣದಿಂದಾಗಿ ಅಂಗಡಿಗೆ ಪ್ರವಾಸಿಗರು ಬರಲು ಹೆದರುತ್ತಿದ್ದಾರೆ. ಹಾಗಾಗಿ ವ್ಯಾಪರಸ್ಥರಿಗೆ ತುಂಬ ನಷ್ಟ ಉಂಟಾಗುತ್ತಿದೆ.

ಶೈಲಾ ಅನಾನಸ್ ಹಣ್ಣು ವ್ಯಾಪರಸ್ಥೆ

ಪ್ರತಿ ಕೆಜಿ ಅನಾನಸ್‍ಗೆ 8ರೂ.ವರೆಗೆ ಕೇಳುತ್ತಿದ್ದಾರೆ. ಬೆಳೆದ ಬೆಳೆಯನ್ನು ಕಟಾವು ಮಾಡಿ ತರಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದೆವೆ.

ರವಿಕುಮಾರ ಕುರುಬರ ಅನಾನಸ್ ಬೆಳೆಗಾರ



ಸುದ್ದಿ ಓದಿ