ಕೊರೆವ ಚಳಿ ಲೆಕ್ಕಿಸದ ರೈತರು : 38ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
ನವದೆಹಲಿ, ಜ 02 : ಕೇಂದ್ರ ಸರ್ಕಾರದ ಕೃಷಿ ಕಾನೂನು ವಿರೋಧಿಸಿ ರೈತರು ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ 38 ನೇ ದಿನಕ್ಕೆ ಕಾಲಿಟ್ಟಿದೆ. ಮಾಜಿ ಸೈನಿಕರು ಮತ್ತು ಸೆಲೆಬ್ರಿಟಿಗಳು ಸಹ ರೈತರನ್ನು ಬೆಂಬಲಿಸಿದ್ದಾರೆ. ಪಂಜಾಬ್, ಉತ್ತರಾಖಂಡ್, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಹೆಚ್ಚಿನ ರೈತರು ಪ್ರತಿಭಟನಾ ಸ್ಥಳಕ್ಕೆ ತಲುಪಿದ್ದಾರೆ. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆಯ ಮೇಲೆ ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸುತ್ತಾ ಜನವರಿ 4 ರಂದು ನಡೆಯಲಿರುವ ಮಾತುಕತೆಗಳ ಬಗ್ಗೆ ರೈತರು ಎದುರು ನೋಡುತ್ತಿದ್ದಾರೆ. ಏತನ್ಮಧ್ಯೆ, ಸ್ವರಾಜ್ ಭಾರತದ ಯೋಗೇಂದ್ರ ಯಾದವ್ ಅವರು ಸೋಮವಾರ ಮಾತುಕತೆಗೆ ಸೂಕ್ತ ತೀರ್ಮಾನಕ್ಕೆ ಬರದಿದ್ದಲ್ಲಿ, ಜನವರಿ 6 ರಂದು ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.
ಪಂಜಾಬ್ನ ರೈತ ಗುಂಪುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಂಗು ಗಡಿಯಲ್ಲಿ ಸೇರ್ಪಡೆಗೊಳ್ಳುತ್ತಲೇ ಇದೆ. ದೆಹಲಿ ಮತ್ತು ಎನ್ಸಿಆರ್ ಪ್ರದೇಶದಲ್ಲಿ ತೀವ್ರ ಚಳಿ ಹಾಗೂ ಲಘು ಮಳೆಯ ನಡುವೆಯೂ ಪ್ರತಿಭಟನೆ ಮುಂದುವರಿದಿದೆ. ಉತ್ತರ ಪ್ರದೇಶದ ಹೆಚ್ಚಿನ ರೈತರು ಘಾಜಿಪುರ ಗಡಿಯಲ್ಲಿ ತಮ್ಮ ಸಹವರ್ತಿಗಳನ್ನು ಬೆಂಬಲಿಸಿದದಾರೆ. ಅಲ್ಲದೆ ಸಿಂಗು ಗಡಿಯಲ್ಲಿ ಮಕ್ಕಳು ಮತ್ತು ಮಹಿಳೆಯರಿಂದಲೂ ಹೆಚ್ಚಿನ ಬೆಂಬಲ ದೊರಕಿದೆ.ರೈತರ ಪ್ರತಿಭಟನೆಯಿಂದಾಗಿ ನೋಯಿಡಾ ಮತ್ತು ಗಾಜಿಯಾಬಾದ್ನಿಂದ ದೆಹಲಿಗೆ ಮಾರ್ಗದ ಸಿಂಗು, ಔಚಾಂಡಿ, ಪಿಯಾವು ಮನಿಯಾರಿ, ಸಬೋಲಿ, ಮಂಗೇಶ್ ಮತ್ತು ಚಿಲ್ಲಾ, ಘಾಜಿಪುರ ಗಡಿಗಳನ್ನು ಒಳಗೊಂಡಿರುವ ಪ್ರಮುಖ ಗಡಿ ಭಾಗಗಳು ಮುಚ್ಚಿಹೋಗಿವೆ ಎಂದು ದೆಹಲಿ ಸಂಚಾರ ಪೊಲೀಸರು ತಿಳಿಸಿದ್ದಾರೆ.