ರೈತರ ಹೋರಾಟಕ್ಕೆ ಮತ್ತೊಮ್ಮೆ ಬೆಂಬಲ ಪುನರುಚ್ಚರಿಸಿದ ರಾಹುಲ್
ನವದೆಹಲಿ, ಜನವರಿ 1: ಹೊಸ ವರ್ಷದ ಅಂಗವಾಗಿ ದೇಶದ ಜನತೆಗೆ ಶುಭಾಶಯ ಕೋರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿಶೇಷವಾಗಿ ನನ್ನ ಹೃದಯ ರೈತರೊಂದಿಗಿದೆ ಎಂದಿದ್ದಾರೆ.ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದ ಸುಧಾರಣಾ ಕೃಷಿ ಕಾಯಿದೆ ವಿರೋಧಿಸಿ ಒಂದು ತಿಂಗಳಿನಿಂದ ಹೋರಾಟ ನಡೆಸುತ್ತಿರುವ ರೈತ ನಾಯಕರಿಗೆ ಮತ್ತೊಮ್ಮೆ ಬೆಂಬಲ ಪುನರುಚ್ಚರಿಸಿದ್ದಾರೆ.ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನಾವು ಕಳೆದುಕೊಂಡದ್ದು, ನಮಗಾಗಿ ತ್ಯಾಗ ಮಾಡಿದವರನ್ನು ನೆನಪಿಸಿಕೊಂಡು ಹೊಸ ವರ್ಷದ ಶುಭಾಶಯ ಕೋರಿದ್ದಾರೆ.ಅಸಮಾನತೆಯ ಶಕ್ತಿಗಳ ವಿರುದ್ಧ ಘನತೆ ಮತ್ತು ಗೌರವಗಳೊಂದಿಗೆ ಹೋರಾಡುತ್ತಿರುವ ರೈತರು ಮತ್ತು ಕಾರ್ಮಿಕರೊಂದಿಗೆ ನನ್ನ ಹೃದಯವಿರುವುದಾಗಿ ರಾಹುಲ್ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾಯ್ದೆಗಳ ವಿರುದ್ಧ ರಾಹುಲ್ ಗಾಂಧಿ ಹಲವು ಬಾರಿ ಕಿಡಿ ಕಾರಿದ್ದಾರೆ. ರೈತರು ಕಳೆದ ಒಂದು ತಿಂಗಳಿನಿಂದ ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟಕ್ಕೆ ರಾಹುಲ್ ಬೆಂಬಲ ನೀಡಿ, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.ದೇಶದ ಜನತೆ ರೈತರ ಬೇಡಿಕೆ ಪರವಾಗಿ ನಿಲ್ಲಬೇಕು ಎಂದೂ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.