ವಿದ್ಯೆಯಿಂದಲೇ ಎಲ್ಲವೂ ಸಾಧ್ಯ: ಚಂದ್ರಣ್ಣ ಶೆಟ್ಟರ್
ಬ್ಯಾಡಗಿ, ಜು.11: ಶಿಕ್ಷಣವು ಮನುಷ್ಯನ ಜೀವನದ ಅಮೂಲ್ಯ ಸಂಪತ್ತಾಗಿದ್ದು, ಹಣ-ಆಸ್ತಿ ಕಳೆದುಕೊಂಡರೂ ಮತ್ತೆ ಸಂಪಾದಿಸಬಹುದು. ಆದರೆ ವಿದ್ಯೆಯನ್ನು ಪಡೆದರೆ ಅದು ಜೀವನಪರ್ಯಂತ ಜೊತೆಯಲ್ಲಿರುತ್ತದೆ ಎಂದು ಎಸ್ಎಸ್ಪಿಎನ್ ಪ್ರೌಢಶಾಲೆಯ ಅಧ್ಯಕ್ಷ ಚಂದ್ರಣ್ಣ ಶೆಟ್ಟರ್ ಹೇಳಿದರು.
ಪಟ್ಟಣದ ಎಸ್ಎಸ್ಪಿಎನ್ ಪ್ರೌಢಶಾಲೆಯಲ್ಲಿ 2000-01ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರು ವಂದನಾ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಳೆ ವಿದ್ಯಾರ್ಥಿ ಪರಮೇಶ್ ಬಡಿಗೇರ ಮಾತನಾಡಿ, “ಇಂದು ನಾನು ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದೇನೆ. ಇದಕ್ಕೆ ಕಾರಣ ಈ ಶಾಲೆಯ ಶಿಕ್ಷಕರು ನೀಡಿದ ಶಿಕ್ಷಣ ಮತ್ತು ಮಾರ್ಗದರ್ಶನ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ, ಶಿಕ್ಷಕರು ಹಾಗೂ ಪೋಷಕರಿಗೆ ಕೀರ್ತಿ ತರುವಂತೆ ಸಾಧನೆ ಮಾಡಬೇಕು” ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಸುಭಾಷ್ ಯಲಿ ಮಾತನಾಡಿ, “2000-01ನೇ ಸಾಲಿನ ಹಳೆ ವಿದ್ಯಾರ್ಥಿಗಳು ಶಾಲೆಯ ಮೇಲಿನ ಅಭಿಮಾನದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ. ನಮ್ಮ ಶಾಲೆಯ ವಿದ್ಯಾರ್ಥಿಯೊಬ್ಬರು ರೈಲ್ವೆ ಇಲಾಖೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿರುವುದು ನಮಗೆ ಹೆಮ್ಮೆಯ ವಿಷಯ” ಎಂದರು.
ಅಂತಾರಾಷ್ಟ್ರೀಯ ಶಿಲ್ಪಕಲಾವಿದ ಹರೀಶ್ ಮಾಳಪ್ಪನವರ್ ಮಾತನಾಡಿ, “ಗುರು ವಂದನಾ ಕಾರ್ಯಕ್ರಮದಲ್ಲಿ ಸಂಗ್ರಹವಾಗುವ ನಿಧಿಯ ಬಡ್ಡಿಯಿಂದ ಪ್ರತಿವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಬಿ.ಎಫ್. ಕರಿಯಣ್ಣ ಸ್ವಾಗತಿಸಿದರು. ಹಳೆ ವಿದ್ಯಾರ್ಥಿಗಳಾದ ಬಾಬು ಕಲಬುರ್ಗಿ, ಪ್ರವೀಣ ಕುಲಕರ್ಣಿ, ಪರಮೇಶ್ ಬಿದರಿ, ರಾಘು ಉಜನಿ, ಸುನೀಲ್ ಧಾರವಾಡ, ವಿನಯ ವಾಲಿ ಶೆಟ್ಟರ್, ಸಂತೋಷ ತೊಪ್ಪಳ, ಶಶಿಧರ ಹಿರೇಮಠ ಸೇರಿದಂತೆ ಹಲವು ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.