ಬ್ಯಾಡ್ಗಿ

ಪ್ರತಿ ಹಳ್ಳಿಯ ಪ್ರತಿ ಮನೆಗೂ ಶುದ್ಧ ನೀರು ದೊರಕಬೇಕು: ಶಾಸಕ ಬಳ್ಳಾರಿ

ಪ್ರತಿ ಹಳ್ಳಿಯ ಪ್ರತಿ ಮನೆಗೂ ಶುದ್ಧ ನೀರು ದೊರಕಬೇಕು: ಶಾಸಕ ಬಳ್ಳಾರಿ

ಬ್ಯಾಡಗಿ 15:  ಮನೆ-ಮನೆಗೆ ಗಂಗೆ ಯೋಜನೆಯ ಮೂಲಕ ಜನರಿಗೆ ಶುದ್ಧ ನೀರನ್ನು ಪೂರೈಸುವ ಉದ್ದೇಶ ಹೊಂದಲಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಜೆಜೆಎಂ ಯೋಜನೆಯಡಿ ತಾಲೂಕಿನ ಇಂಗಳಗೊಂದಿ ಗ್ರಾಮದಲ್ಲಿ 50 ಲಕ್ಷ ರೂ. ಹಾಗೂ ಬನ್ನಿಹಳ್ಳಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರತಿ ಹಳ್ಳಿಯ ಪ್ರತಿ ಮನೆಗೂ ಶುದ್ಧ ನೀರು ದೊರಕಬೇಕು. ನೀರಿನ ಮಿತಬಳಕೆ, ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಯುವುದು, ಪ್ರತಿ ಹನಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು, ನೀರು ಕಲುಷಿತಗೊಳ್ಳದಂತೆ ನಿರ್ವಹಣೆ ಮಾಡಿ ಪ್ರತಿ ವ್ಯಕ್ತಿಗೂ ಶುದ್ಧ ನೀರು ಪೂರೈಸುವ ಯೋಜನೆ ಇದಾಗಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಆರ್.ಎಂ. ಸೊಪ್ಪಿನಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಯೋಜನೆಯಡಿ ಪ್ರತಿ ವ್ಯಕ್ತಿಗೆ ಪ್ರತಿದಿನ 55 ಲೀಟರ್‍ನಂತೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಲಾಗಿದ್ದು, ಪ್ರತಿ ಗ್ರಾಮದ ಜನಸಂಖ್ಯೆ ಹಾಗೂ ನೀರಿನ ಪ್ರಮಾಣ ಆಧರಿಸಿ ಮೊದಲ ಹಂತದಲ್ಲಿ ಸಂಪರ್ಕ ಕಲ್ಪಿಸಲಾಗುವುದು. ಜನಸಂಖ್ಯೆ ಆಧರಿಸಿ ಕಡಿಮೆ ನೀರಿನ ಮೂಲಗಳಿರುವ ಗ್ರಾಮಗಳಲ್ಲಿ ಜಲಶೇಖರಣೆ ಕಾಮಗಾರಿಗಳನ್ನು ಕೈಗೊಂಡು ಹಂತ ಹಂತವಾಗಿ ಪ್ರತಿಯೊಂದು ಮನೆಗೂ ಸಂಪರ್ಕ ಕಲ್ಪಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ಜಿಪಂ ಸದಸ್ಯ ಅಬ್ದುಲ್’ಮುನಾಫ ಯಲಿಗಾರ, ತಾಪಂ ಸದಸ್ಯ ಜಗದೀಶ ಪೂಜಾರ, ಹೆಡಿಗ್ಗೊಂಡ ಗ್ರಾಪಂ ಅಧ್ಯಕ್ಷ ಸಹದೇವಪ್ಪ ಬನ್ನಿಹಳ್ಳಿ, ಮುಖಂಡರಾದ ಶಂಕ್ರಪ್ಪ ಮಾತನವರ, ಸುರೇಶ ಯತ್ನಳ್ಳಿ, ಪಿಡಿಓ ವಿಶ್ವನಾಥ ಕಟ್ಟೆಗೌಡರ, ಕಾರ್ಯದರ್ಶಿ ಜಗದೀಶ ಮಣ್ಣಮ್ಮನವರ, ರಾಮಣ್ಣ ಗಾಜೇರ, ಗುತ್ತಿಗೆದಾರರಾದ ಪುಟ್ಟನಗೌಡ್ರ ಪಾಟೀಲ, ರಾಜು ಗುರಮ್, ಕಾಗಿನೆಲೆ ಹಾಗೂ ಹೆಡಿಗ್ಗೊಂಡಗ್ರಾಪಂ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ