ತಾಳಿಕೋಟಿ

ಹೇಮರೆಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆ ಸ್ಥಾಪನೆ: ಮಾಜಿ ಸಚಿವ ಜಿ.ಜನಾರ್ಧನರೆಡ್ಡಿ ಘೋಷಣೆ

ಹೇಮರೆಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆ ಸ್ಥಾಪನೆ: ಮಾಜಿ ಸಚಿವ ಜಿ.ಜನಾರ್ಧನರೆಡ್ಡಿ ಘೋಷಣೆ

ತಾಳಿಕೋಟೆ: ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಮಧ್ಯದಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಹೇಮರೆಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆ ಮಾಡಿ, ಬಡವರಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡಲಾಗುವದು ಎಂದು ಮಾಜಿ ಸಚಿವ ಜಿ.ಜನಾರ್ಧನ ರೆಡ್ಡಿ ಹೇಳಿದರು. 

ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಾಧ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ತಾಯಿಯ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ಸಾಂಸ್ಕೃತಿಕ ಭವನದ ಶಂಕು ಸ್ಥಾಪನೆ ಹಾಗೂ ರೆಡ್ಡಿ ಸಮುದಾಯ ಭವನದ ಭೂಮಿ ಪೂಜಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 

ಅವಳಿ ಜಿಲ್ಲೆಯಲ್ಲಿ ಭೂಮಿ ಗುರುತಿಸುವ ಕಾರ್ಯ ನಡೆಯುತ್ತಿದೆ. 200 ಎಕರೆ ಜಮೀನಿನಲ್ಲಿ 100 ಅಡಿ ಶಿವಲಿಂಗ, 50 ಅಡಿ ಹೇಮರಡ್ಡಿ ಮಲ್ಲಮ್ಮ ಹಾಗೂ 50 ಅಡಿ ಹೇಮನ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ. ಉಳಿದ ಜಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಲಾಗುವದು. ಇವತ್ತು ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು, ಪೂರ್ವ ಜನ್ಮದ ಪುಣ್ಯವಾಗಿದೆ. ರೆಡ್ಡಿ ಸಮುದಾಯದವರು ಕಾಯಕ, ಶ್ರಮ ಜೀವಿಗಳು, ನಾನು ರಾಜಕೀಯಕ್ಕೆ ಬಂದಾಗ ಜಾತಿ ಜನಾಂಗದವರಿಂದ ದೂರ ಇದ್ದೆ. ಸಮಾಜದ ಕಟ್ಟಕಡೆಯ ಶೋಷಿತರ ಏಳಿಗೆಗೆ ದುಡಿಯಬೇಕು ಎಂದು ಸಮಾಜದ ಕಾರ್ಯಗಳಿಗೆ ದುಡಿಯುತ್ತಿದ್ದೇನೆ. ಇಲ್ಲಿಯವರೆಗೂ ಸುಮಾರು 150 ಸಮಾಜದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಅದರಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿದೆ. ರೆಡ್ಡಿ ಸಮಾಜದವರು ಯಾರೇ ಕಷ್ಟ ಅಂದರೂ ಅವರಿಗೆ ಸಹಾಯ ಮಾಡುತ್ತೇವೆ. ಒಳ್ಳೆಯವರ ಕೈ ಹಿಡಿದು ಬೆಳೆಸಬೇಕು, ಹಿಂದುಳಿದ ನಾಯಕ ಶ್ರೀರಾಮುಲು ಅವರನ್ನು ಬೆಳೆಸಿದ್ದು, ನಾನು ಎಂಬ ಖುಷಿ ಇದೆ. ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಬರಲು, ಯಡಿಯೂರ​‍್ಪ ಸಿಎಂ ಆಗಲು ರೆಡ್ಡಿಗಳೇ ಕಾರಣ ಎನ್ನುವ ಮಟ್ಟಕ್ಕೆ ರೆಡ್ಡಿ ಸಮಾಜದ ಬೆಳೆದಿದೆ ಎಂದರು. 

ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಎಲ್ಲ ಜಿಲ್ಲೆಗಳಲ್ಲಿರುವ ರೆಡ್ಡಿ ಸಮಾಜದವರು ಒಂದಾಗಬೇಕು. 2017ರಲ್ಲಿ ರಾಜ್ಯ ಮಟ್ಟದ ರೆಡ್ಡಿ ಸಮಾವೇಶ ಮಾಡಿದ್ದೆವು. ಈ ಬಾರಿ ವಿಜಯಪುರ ಅಥವಾ ಭಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ರಾಜ್ಯಮಟ್ಟದ ರೆಡ್ಡಿ ಸಮಾವೇಶವನ್ನು ಪಕ್ಷಾತೀತಿವಾಗಿ ಹಮ್ಮಿಕೊಳ್ಳಲಾಗುವದು. ಸಮಾಜ ಹೆಚ್ಚು ಜನರು ಶಿಕ್ಷಣವಂತರಾಗಬೇಕು. ಹೆಚ್ಚು ಹೆಚ್ಚು ಸಮುದಾಯಭವನ, ಹಾಸ್ಟೆಲ್ ಗಳನ್ನು ಕಟ್ಟಬೇಕು, ಹೆಣ್ಣುಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಬೇಕು. ನಾನು ಕೂಡಾ ನನ್ನ ಕೈಲಾದ ಸಹಾಯವನ್ನು ಮಾಡುತ್ತೇನೆ ಎಂದರು. 

ಅಧ್ಯಕ್ಷತೆಯನ್ನು ಮುದ್ದೇಬಿಹಾಳ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌.ಪಾಟೀಲ ನಡಹಳ್ಳಿ, ಮಾಜಿ ಸಚಿವ ಸಿ.ಎಸ್‌.ನಾಡಗೌಡ(ಅಪ್ಪಾಜಿ), ಸುರಪೂರ ಶಾಸಕ ರಾಜುಗೌಡ ನಾಯಕ, ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪೂರ, ಪಿ.ಎಚ್‌.ಪೂಜಾರಿ ಮಾತನಾಡಿದರು. 

ಸಾನಿಧ್ಯ ವಹಿಸಿದ್ದ ಶ್ರೀಶೈಲದ ಜಗಗ್ದುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಹರಿಹರದ ಮಹಾಯೋಗಿ ವೇಮನ ಸಂಸ್ಥಾನಮಠದ ವೇಮನಾನಂದ ಮಹಾಸ್ವಾಮಿಗಳು, ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು, ಗುಂಡಕನಾಳದ ಬ್ರಹನ್ಮಠದ ಗುರಲಿಂಗ ಶಿವಾಚಾರ್ಯರು, ಹಿರೂರ ಅನ್ನದಾನೇಶ್ವರ ಸಂಸ್ಥಾನಮಠದ ಗುರುಜಯಸಿದ್ದೇಶ್ವರ ಶಿವಾಚಾರ್ಯರು ಆಶಿರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಉದ್ಯಮಿ ಲಲ್ಲೇಶ ರೆಡ್ಡಿ, ವಸಂತ ಕವಿತಾ ರೆಡ್ಡಿ, ಸುನೀತಾ ಚವ್ಹಾಣ, ಭೂಧಾನಿ ಶರಣಗೌಡ ಇಬ್ರಾಹಿಂಪೂರ, ಶಿವಾನಂದ ದೇಸಾಯಿ, ಸುಭಾಸ ಛಾಯಾಗೋಳ, ಬಿ.ಎಸ್‌.ಪಾಟೀಲ ಯಾಳಗಿ, ಆರ್‌.ಎಸ್‌.ಪಾಟೀಲ ಕೂಚಬಾಳ, ರಾಜಶೇಖರಗೌಡ ಪಾಟೀಲ, ಆನಂದ ದೊಡಮನಿ ಸೇರಿದಂತೆ ಇತರರು ಇದ್ದರು. 

ಅಮರಯ್ಯ ಹಿರೇಮಠ ಪ್ರಾರ್ಥಿಸಿದರು. ವಿರೇಶ ವಾಲಿ ಸಂಗಡಿಗರು ನಾಡಗೀತೆ, ರೈತ ಗೀತೆಯನ್ನು ಹಾಡಿದರು. ಎಚ್‌.ಎಸ್‌.ಪಾಟೀಲ ಸ್ವಾಗತಿಸಿದರು. ಶ್ರೀಕಾಂತ ಪತ್ತಾರ, ಅಶೋಕ ಹಂಚಲಿ, ಅಜೀತ ಯಾಳಗಿ ನಿರೂಪಿಸಿದರು. 



ಅದ್ದೂರಿ ಮೆರವಣಿಗೆ :- ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಾಧ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ತಾಯಿಯ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ಸಾಂಸ್ಕೃತಿಕ ಭವನದ ಶಂಕು ಸ್ಥಾಪನೆ ಹಾಗೂ ರೆಡ್ಡಿ ಸಮುದಾಯ ಭವನದ ಭೂಮಿ ಪೂಜಾ ಸಮಾರಂಭದ ಅಂಗವಾಗಿ ಪಟ್ಟಣದಲ್ಲಿ ಅದ್ದೂರಿಯಾಗಿ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರ, ಕಳಸದ ಮೆರವಣಗೆ ಮಾಡಲಾಯಿತು.  

ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಭಾವಚಿತ್ರ ಮೆರವಣಿಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ 501 ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ನಾಶಿಕ್ ಡೋಲ್ ಗಮನ ಸೆಳೆಯಿತು. ಮೆರವಣಿಗೆಯು ಡಾ.ಬಿ.ಆರ್‌.ಅಂಬೇಡ್ಕರ ವೃತ್ತ, ಕತ್ರಿ ಬಜಾರ, ಶಿವಾಜಿ ವೃತ್ತ, ಬಸ್ ನಿಲ್ದಾಣ, ಬಸವೇಶ್ವರ ವೃತ್ತದ ಮೂಲಕ ಹಾಯ್ದು ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಆಗಮಿಸಿ ಕಳಾಸೋರಹಣವನ್ನು ಮಾಡಲಾಯಿತು. ಪೂರ್ಣಕುಂಬ ಹೊತ್ತ ಮಹಿಳೆಯರಿಗೆ ಸಮಾಜ ಸೇವಕಿ ಅಕ್ಕಮಹಾದೇವಿ ಪಾಟೀಲ ನಡಹಳ್ಳಿ ಅವರು ಸೀರೆ, ಬಟ್ಟೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬಸನಗೌಡ ವಣಕ್ಯಾಳ, ಪ್ರಭುಗೌಡ ಮದರಕಲ್ಲ, ಎಂ.ಎಚ್‌.ಹಂದ್ರಾಳ, ಶಂಕರಗೌಡ ಕಂತಲಗಾವಿ, ಬಸನಗೌಡ ಕುಪ್ಪಿ, ಪ್ರಭುಗೌಡ ಮದರಕಲ್ಲ, ಎಚ್‌.ಎಸ್‌.ಪಾಟೀಲ, ಬಸನಗೌಡ ಚೌಧರಿ, ಚಿಂತಪ್ಪಗೌಡ ಯಾಳಗಿ, ಶಾಂತಗೌಡ ಹೊಸಹಳ್ಳಿ, ಸಂಗನಗೌಡ ಹೆಗರೆಡ್ಡಿ, ಶರಣಭೂಪಾಲ ದೇಶಮುಖ, ಬಸನಗೌಡ ಬಿರಾದಾರ, ಬಸನಗೌಡ ಜೈನಾಪೂರ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ