ಇಂಡಿ

ಇಂಡಿ ತಾಲೂಕಿನಲ್ಲಿ 7 ಮತದಾನ ಕೇಂದ್ರ ಸ್ಥಾಪನೆ: ಗಡದೆ

ಇಂಡಿ ತಾಲೂಕಿನಲ್ಲಿ 7 ಮತದಾನ  ಕೇಂದ್ರ ಸ್ಥಾಪನೆ: ಗಡದೆ

ಇಂಡಿ: ಜೂ.13 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಇಂಡಿ ತಾಲೂಕಿನಲ್ಲಿ 7 ಮತದಾನ  ಕೇಂದ್ರಗಳನ್ನು ಮಾಡಲಾಗಿದೆ ಎಂದು  ಚುನಾವಣೆ ನೋಡಲ್ ಅಧಿಕಾರಿ ಮತ್ತು ಕಂದಾಯ ಉಪವಿಭಾಗಾಧಿಕಾರಿಗಳಾದ ರಾಮಚಂದ್ರ ಗಡದೆ ಹೇಳಿದರು. 

ಶನಿವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ನಡೆದ ಚುನಾವಣೆ ಸಿಬ್ಬಂದಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.  ಚುನಾವಣೆಗೆ 42 ಜನ ಸಿಬ್ಬಂದಿ ಮತ್ತು 23 ಪೋಲಿಸರು ಕೆಲಸ ನಿರ್ವಹಿಸುವರು. ರವಿವಾರ ಜೂ. 12 ರಂದು ಬೆಳಗ್ಗೆ 9 ರಿಂದ ಮಾಸ್ಟರಿಂಗ್ ಕಾರ್ಯ ಮಿನಿ ವಿಧಾನಸೌಧದಲ್ಲಿ ನಡೆಯಲಿದೆ. 

13 ರಂದು ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 5 ಗಂಟೆಯ ವರೆಗೆ ಚುನಾವಣೆ ನಡೆಯಲಿದೆ. ಸಿಬ್ಬಂದಿ ಕೊಟ್ಟ ಪೆನ್ನಿನಿಂದಲೇ ಮತದಾರರು ಮತ ಚಲಾಯಿಸಬೇಕು ಎಂದರು. 

ಇಂಡಿ ಪಟ್ಟಣದ ಪುರಸಭೆ ಹತ್ತಿರದ ಕನ್ನಡ ಗಂಡು ಮಕ್ಕಳ ಶಾಲೆಯ  ದಕ್ಷಿಣ ಮತ್ತು ಉತ್ತರ ಕಡೆಗೆ ಎರಡು ಮತದಾನ ಕೇಂದ್ರಗಳಿವೆ. ಅಗರಖೇಡದ ಕನ್ನಡ ಗಂಡು ಮಕ್ಕಳ ಶಾಲೆ, ಸಾಲೋಟಗಿಯ ಕನ್ನಡ ಗಂಡು ಮಕ್ಕಳ ಶಾಲೆ, ಬಳ್ಳೊಳ್ಳಿಯ ಕನ್ನಡ ಗಂಡು ಮಕ್ಕಳ ಶಾಲೆ, ಹೋರ್ತಿಯ ಕನ್ನಡ ಗಂಡು ಮಕ್ಕಳ ಶಾಲೆ ಮತ್ತು ಅಥರ್ಗಾದ ಕನ್ನಡ ಗಂಡು ಮಕ್ಕಳ ಶಾಲೆಗಳಲ್ಲಿ ಮತದಾನ ನಡೆಯಲಿದೆ ಮತ್ತು 2268 ಪದವೀಧರರು ಮತ್ತು 623 ಶಿಕ್ಷಕರು ಒಟ್ಟು 2891 ಮತದಾರರು ಮತಚಲಾಯಿಸಲಿದ್ದಾರೆ    ಎಂದು ರಾಮಚಂದ್ರ ಗಡದೆ ತಿಳಿಸಿದರು.  

ಚುನಾವಣೆ ಮುಗಿದ ನಂತರ ಇಂಡಿಯ ತಾಲೂಕು ಆಡಳಿತ ಸೌಧದಲ್ಲಿ ಇಂಡಿ ತಾಲೂಕಿನ ಡಿಮಸ್ಟರಿಂಗ ಕಾರ್ಯ ನಡೆಯಲಿದೆ ಎಂದರು. 

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಶಿರಸ್ತೆದಾರ ಆರ್‌.ಬಿ. ಮೂಗಿ, ವಿಷಯ ನಿರ್ವಾಹಕ ಎಚ್‌.ಎಚ್‌. ಗುನ್ನಾಪುರ ಮತ್ತಿತರಿದ್ದರು.   


ಸುದ್ದಿ ಓದಿ