ಗೋಕಾಕ್

ಪರಿಸರ ರಕ್ಷಣೆ ಎಲ್ಲರ ಕರ್ತವ್ಯ: ಅಂಥೋನಿ ಮರಿಯಪ್ಪಾ

ಪರಿಸರ ರಕ್ಷಣೆ ಎಲ್ಲರ ಕರ್ತವ್ಯ: ಅಂಥೋನಿ ಮರಿಯಪ್ಪಾ

ಗೋಕಾಕ 11: ಇಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆಯು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಪಾತ್ರ ಈ ನಿಟ್ಟಿನಲ್ಲಿ ಬಹು ಮುಖ್ಯವಾಗಿದೆ ಎಂದು ಸ್ಥಳೀಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಮರಿಯಪ್ಪಾ ಅಭಿಪ್ರಾಯಪಟ್ಟರು.  

ಅವರು ನಗರದ ಶಂಕರಲಿಂಗ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಪ್ಲಾಸ್ಟಿಕ್ ಮಾಲಿನ್ಯ ತಡೆ ಕಾರ್ಯಕ್ರಮದ ನಿಮಿತ್ಯ ಸ್ಪರ್ಧಾ ವಿಜೇತರ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಇಂದು ಆಧುನಿಕತೆಯ ಭರಾಟೆಯಲ್ಲಿ ಮಾನವನು ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶಪಡಿಸುತ್ತಿದ್ದಾನೆ. ಹೀಗಾಗಿ ಇದರ ರಕ್ಷಣೆ ಪ್ರತಿಯೊಬ್ಬರ ಮುಖ್ಯ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮವನ್ನು ಹುಕ್ಕೇರಿ ಪ್ರಾದೇಶಿಕ  ಅರಣ್ಯ ಇಲಾಖೆ ಆಯೋಜಿಸಿತ್ತು. ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ವಿತರಿಸಲಾಯಿತು. ಕಳೆದ 6 ವರ್ಷಗಳಿಂದ ಗಸ್ತು ವನಪಾಲಕ ಎ.ಜಿ.ಸಂಕ್ರಿ ಪ್ರಾಯೋಜಕತ್ವದಲ್ಲಿ ಬಹುಮಾನಗಳನ್ನು ವಿತರಿಸಲಾಗುತ್ತಿದೆ. 

ವಲಯ ಅರಣ್ಯಾಧಿಕಾರಿ ಸಂಜು ಸಂಸುದ್ದಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದರ್ಶ ಶಿಕ್ಷಣ ಸಂಸ್ಥೆಯ ಗೋಕಾಕ ಇದರ ಅಧ್ಯಕ್ಷ ಬಿ.ಎಮ್‌.ಹಿಂಡಿಹೊಳಿ ವಹಿಸಿದ್ದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆರ್‌. ಎಸ್‌. ಹೆಬ್ಬಾಳೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಸಿ.ಎಲ್‌.ಮಗದುಮ ವಂದಿಸಿದರು. ಕಾರ್ಯಕ್ರಮವನ್ನು ಕೆ.ಎಚ್‌.ಅಖಾನಿ ನಿರೂಪಿಸಿದರು. ಪ್ರಬಂಧ, ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಗಳಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ