ನೌಕರರು ಸಮಸ್ಯೆಗಳ ಮಧ್ಯೆಯೇ ಬದುಕು ಸಾಗಿಸುತ್ತಿದ್ದಾರೆ-ಮುದಕಣ್ಣನವರ
ರಾಣೀಬೆನ್ನೂರ.ಫೆ.20 ಯಾವುದೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ನೌಕರ ವರ್ಗವು ಒಂದಿಲ್ಲ ಒಂದು ಸಮಸ್ಯೆಗಳ ಮಧ್ಯೆಯೇ ತಮ್ಮ ಸೇವೆಯನ್ನು ಸಲ್ಲಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಮಾನತೆಯ ನ್ಯಾಯ ಹಕ್ಕು ಪಡೆಯಲು ಸಂಘಟನೆ ಬಹುಮುಖ್ಯವಾಗುತ್ತದೆ. ಇಂದು ಪ್ರಬಲವಾಗಿ ಬೆಳೆದಿರುವ ಕರ್ನಾಟಕ ವಿದ್ಯುತ್ ಪ್ರಸರಣ ನೌಕರರ ಸಂಘವು ನೌಕರರ ಹಿತಾಸಕ್ತಿಗಾಗಿ ಸದಾ ಬದ್ಧವಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಲಿದೆ ಅದಕ್ಕಾಗಿ ಸಾಂಘಿಕ ಸಹಕಾರ ಬಹು ಅಗತ್ಯವಾಗುತ್ತದೆ ಎಂದು ಸಂಘದ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ವಿಜಯಕುಮಾರ ಮುದಕಣ್ಣನವರ ಹೇಳಿದರು.
ಅವರು ಶುಕ್ರವಾರ ಇಲ್ಲಿನ ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಾರ್ಥನಾ ಮಂದಿರ ಉದ್ಘಾಟನೆ ಮತ್ತು ನೌಕರರ ಸಂಘಕ್ಕೆ ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನೌಕರರು ತಮ್ಮ ಕರ್ತವ್ಯದ ಜೊತೆಗೆ ಇಲಾಖೆಯ ಕೆಲಸ ಕಾರ್ಯಗಳೂ ಸಹ ನ್ಯಾಯ ಸಮ್ಮತವಾಗಿ ಮಾಡಲು ಮುಂದಾಗಿ ಗ್ರಾಹಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಬೇಕು. ಇದರಿಂದ ಇಲಾಖೆಗೆ ಉತ್ತಮವಾದ ಹೆಸರು ಬರುತ್ತದೆ ಎಂದ ಅವರು ಪ್ರಾರ್ಥನಾ ಮಂದಿರ ನಿರ್ಮಾಣದಿಂದಾಗಿ ಸಮುದಾಯದ ಯಾವುದೇ ಕಾರ್ಯಕ್ರಮಗಳು ನಡೆಸಲು ಅನುಕೂಲವಾಗಿದೆ. ನೌಕರರ ಈ ಸಾಮಾಜಿಕ ಸೇವಾ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಎನ್.ಸಿ.ಬೆಳಕೇರಿ ಅವರು ಜಿಲ್ಲೆಯಲ್ಲಿಯೇ ಅತ್ಯಂತ ಪ್ರಬಲವಾಗಿ ಬೆಳವಣಿಗೆ ಕಾಣುತ್ತಿರುವ ಈ ವಾಣಿಜ್ಯ ನಗರದಲ್ಲಿ ಹೆಸ್ಕಾಂ ತನ್ನಸೇವೆಯ ಮೂಲಕ ಗೌರವ ಸಂಪಾದಿಸಿದೆ. ನೌಕರರು ಸದಾ ಕಾಲ ಕ್ರೀಯಾಶೀಲರಾಗಿ ತಮ್ಮ ನಿತ್ಯದ ಬದುಕಿನಲ್ಲಿ ಕರ್ತವ್ಯವನ್ನು ಮೆರೆಯುತ್ತಿರುವುದರಿಂದಲೇ ನಾಗರೀಕರಿಗೆ ಸೇವೆ ನೀಡಲು ಸಾಧ್ಯವಾಗುತ್ತಲಿದೆ ಎಂದರು. ಮುಖ್ಯ ಅತಿಥಿಗಳಾಗಿ ರೈತ ಯುವ ಮುಖಂಡ ಪ್ರಭುಸ್ವಾಮಿ ಕರ್ಜಗಿಮಠ, ಅಧೀಕ್ಷಕ ಅಭಿಯಂತ ಎಸ್. ಈರಣ್ಣ, ಸಂಘಟನಾ ಕಾರ್ಯದರ್ಶಿ ಬಸವರಾಜಯ್ಯ ಎಚ್.ಎಸ್. ಕೇಂದ್ರ ಸಮಿತಿ ಸದಸ್ಯರಾದ ಡಿ.ಎಚ್.ಹುಬ್ಬಳ್ಳಿ, ಎ.ಕೆ.ಯಮನೂರ, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಕುಮ್ಮೂರ, ಲೆಕ್ಕಾಧಿಕಾರಿಗಳಾದ ರಾಮಪ್ಪ ಟಿ.ಎಸ್, ನಿಂಗರಾಜ ಡಿ, ಸ್ಥಳೀಯ ಸಮಿತಿ ಅಧ್ಯಕ್ಷ ಎಸ್.ಬಿ.ಹೊಳಿಯಣ್ಣನವರ, ಹಿರಿಯ ಸಹಾಯಕ ಬೀರಪ್ಪ ತಿಪ್ಪಣ್ಣನವರ, ರಾಜೀವ ಮರಿಗೌಡರ, ಎನ್.ವಿ.ಸೋಮಕ್ಕಳವರ ಸೇರಿದಂತೆ ಮತ್ತಿತರ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಟ್ಟೀಹಳ್ಳಿ, ಹಿರೇಕೆರೂರ, ಬ್ಯಾಡಗಿ, ಶಿಗ್ಗಾವಿ, ಸವಣೂರ, ಹಾವೇರಿ, ಹಾನಗಲ್ ತಾಲೂಕುಗಳ ಪ್ರತಿನಿಧಿಗಳು ಸಂಘಟನೆಯ ಮುಖ್ಯಸ್ಥರನ್ನು ಸನ್ಮಾನಿಸಿ ಅಭಿನಂದಿಸಿದರು. ಲಕ್ಕಪ್ಪ ಪೂಜಾರ ಪ್ರಾರ್ಥಿಸಿದರು. ಸ್ಥಳೀಯ ಸಮಿತಿ ಕಾರ್ಯದರ್ಶಿ ಸ್ವಾಗತಿಸಿ, ನಿರೂಪಿಸಿದರು. ಮಂಜು ಬಾರ್ಕಿ ವಂದಿಸಿದರು.