ಪಶ್ಚಿಮಘಟ್ಟಗಳ ಓಷಧೀಯ ಸಸ್ಯ ಸಂಪತ್ತಿನ ಸಂರಕ್ಷಣೆಗೆ ಒತ್ತು
ಲೋಕದರ್ಶನ ವರದಿ
ದಾಂಡೇಲಿ 05 : ಪಶ್ಚಿಮಘಟ್ಟಗಳ ಓಷಧೀಯ ಮತ್ತು ಸುಗಂಧ ಸಸ್ಯಗಳ ಕುರಿತು “ ಸಾಂಪ್ರದಾಯಿಕ ಜ್ಞಾನ ಮತ್ತು ವೈದ್ಯಕೀಯ ಪ್ರಾಯೋಗಿಕತೆಯ ನಡುವಿನ ಸೇತುವೆ” ಎಂಬ ಆಶಯದೊಂದಿಗೆ 8ನೇ ರಾಷ್ಟ್ರೀಯ ಮಟ್ಟದ ಕ್ಷೇತ್ರಕಾರ್ಯಾಗಾರ ಅ.1ರಿಂದ 3ರವರೆಗೆ ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಳಗಿ ನೇಚರ್ ಕ್ಯಾಂಪ್ನಲ್ಲಿ ನಡೆಯಿತು.
ಕೆ.ಎಲ್.ಇ ಕಾಲೇಜ್ ಆಫ್ ಫಾರ್ಮಸಿ, ಬಸವನ ಕುಡಚಿ, ಬೆಳಗಾವಿ ಹಾಗೂ ಋಒಖ-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರಡಿಷನಲ್ ಮೆಡಿಸಿನ್ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ನಿರ್ದೇಶಕಿ ಡಾ. ಸುಬರ್ಣಾ ರಾಯ್ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು.
ಡಾ. ಸುಬರ್ಣಾ ರಾಯ್ ಮಾತನಾಡಿ, ಪಶ್ಚಿಮಘಟ್ಟಗಳಲ್ಲಿನ ಸಮೃದ್ಧ ಓಷಧೀಯ ಸಸ್ಯ ವೈವಿಧ್ಯತೆಯ ಕುರಿತು ಅರಿವು ಮೂಡಿಸಲು ಕ್ಷೇತ್ರಾಧಾರಿತ ಕಾರ್ಯಾಗಾರಗಳು ಸಹಕಾರಿ. ಓಷಧೀಯ ಮತ್ತು ಸುಗಂಧ ಸಸ್ಯಗಳ ಕುರಿತು ಜ್ಞಾನ ಹಂಚಿಕೆ, ಸಾಮರ್ಥ್ಯವರ್ಧನೆ ಹಾಗೂ ಪ್ರಾಯೋಗಿಕ ಅನುಭವ ಪಡೆಯಲು ಇವು ಉತ್ತಮ ವೇದಿಕೆಯಾಗಿವೆ. ಶೈಕ್ಷಣಿಕ, ಸಂಶೋಧನಾ, ಸರ್ಕಾರಿ ಸಂಸ್ಥೆಗಳು ಹಾಗೂ ಸಾಂಪ್ರದಾಯಿಕ ಜ್ಞಾನ ಹೊಂದಿರುವವರ ನಡುವೆ ಸಹಯೋಗ ಬೆಳೆಸಿ ಓಷಧೀಯ ಸಸ್ಯಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಗೆ ಒತ್ತು ನೀಡಬೇಕು ಎಂದರು.