ಸಮಗ್ರ ನೀರಾವರಿಗೆ ಹೆಚ್ಚಿನ ಒತ್ತು
ತಾಳಿಕೋಟೆ24: ದೇವರ ಹಿಪ್ಪರಗಿ ಮತಕ್ಷೇತ್ರದ ಸಮಗ್ರ ನೀರಾವರಿಯನ್ನಾಗಿ ಮಾರಿ್ಡಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, 1000 ಕೋಟಿ ವೆಚ್ಚದಲ್ಲಿ ನೀರಾವರಿ ಕಾಮಗಾರಿಗಳು ಮತಕ್ಷೇತ್ರದಲ್ಲಿ ನಡೆಯುತ್ತಿವೆ ಎಂದು ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
ಅವರು ತಾಲೂಕಿನ ಗೋಟಖಂಡ್ಕಿ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ಪರೀಶೀಲಿಸಿ ಮಾತನಾಡಿದರು.
ಪಿರಾಪೂರ ಬೂದಿಹಾಳ ಏತ ನೀರಾವರಿ ಕಾಮಗಾರಿಗೆ 523 ಕೋಟಿ ಅನುದಾನ ಖರ್ಚಾಗಿದೆ. ಇದೀಗ ಹೆಚ್ಚುವರಿಯಾಗಿ 796 ಕೋಟಿ ಅನುದಾನ ನೀಡಿದ್ದು ಶಿಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ. 280 ಕೋಟಿ ವೆಚ್ಚದಲ್ಲಿ ಬಿಜಾಪೂರ ಮುಖ್ಯ ಕಾಲುವೆ ಕಾಮಗಾರಿ, 100 ಕೋಟಿ ವೆಚ್ಚದಲ್ಲಿ ಹೊಲಗಾಲುವೆ ನಿರ್ಮಾಣ ಕಾಮಗಾರಿ, 130 ಕೋಟಿ ವೆಚ್ಚದಲ್ಲಿ ಸಂಕನಾಳ ಮುಖ್ಯ ಕಾಲುವೆ ನಿರ್ಮಾಣ ಕಾಮಗಾರಿ ಅನುಮೋದನೆಯಾಗಿದೆ. ಹುಣಶ್ಯಾಳ, ಕುದರಗುಂಡ ಕೆರೆ ತುಂಬುವ ಯೋಜನೆ ಕಾಮಗಾರಿ ಆರಂಭ ಹಂತದಲ್ಲಿದೆ. ಈಗಾಗಲೇ ಮತಕ್ಷೇತ್ರದಲ್ಲಿರುವ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಅದಕ್ಕಾಗಿಯೇ 3 ಟಿಎಮ್ಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಹಳ್ಳ, ಡೋಣಿ, ಕೆರೆ, ಬಾಂದಾರಗಳಿಗೆ ನೀರು ಲಭ್ಯವಾಗಲಿದೆ. ಪ್ರವಾಹ ಪರಸ್ಥಿತಿ ಇರುವವರೆಗೂ ನೀರು ಹರಿಸಲು ಆಲಮಟ್ಟಿ ಡ್ಯಾಮನ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮತಕ್ಷೇತ್ರದಲ್ಲಿ 5 ನೂತನ ಕೆರೆ ನಿರ್ಮಾಣ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮತಕ್ಷೇತ್ರಕ್ಕೆ 20 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಮಂಜೂರಾಗಿದ್ದು 10 ಕೋಟಿ ತಾಳಿಕೋಟಿ ತಾಲೂಕಿನ ಹಳ್ಳಿಗಳಿಗ ಮೀಸಲಿಡಿರಿಸಲಾಗಿದೆ. 23 ಕೋಟಿ ವೆಚ್ಚದಲ್ಲಿ ಡಿಂಡವಾರ- ಸಾಸನೂರ, ಚಿಕ್ಕರೂಗಿ- ದೇವರ ಹಿಪ್ಪರಗಿ ರಸ್ತೆ ಅಬಿವೃದ್ದಿ ಕಾಮಗಾರಿ ಮಂಜೂರಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ಅಭಿವೃದ್ದಿ ಕಾಮಗಾರಿಗಳಿಗೆ ತಡೆಯಾಗಿದ್ದು ನಿಜ. ಆದರೆ ಬಿ.ಎಸ್.ಯಡಿಯೂರಪ್ಪಾ ಹಾಗೂ ಬಸವರಾಜ ಬೊಮ್ಮಾಯಿ ಅವರು ಮತಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದರು. ಗೋಟಖಂಡ್ಕಿ ಗ್ರಾಮದಲ್ಲಿ ನಡೆಯುತ್ತಿರುವ ಇಂದಿರಾಗಾಂಧಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಕಾಮಗಾರಿಯ ಗುಣಮಟ್ಟವನ್ನು ಕಾಪಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಗೋಟಖಂಡ್ಕಿ ಗ್ರಾಮದಲ್ಲಿ ನಡೆಯುತ್ತಿರುವ ಕಾಲುವೆ ಕಾಮಗಾರಿ, ಗೋಟಖಂಡ್ಕಿ-ತುಂಬಗಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪರೀಶೀಲಿಸಿದರು.
ಬಿಜೆಪಿ ಮುಖಂಡ ಸಾಹೇಬಗೌಡ ಪಾಟೀಲ, ಪ್ರಶಾಂತ ಹಾವರಗಿ, ಸಂಗನಗೌಡ ಹೆಗರಡ್ಡಿ, ಮಾಜಿ ಜಿಪಂ ಸದಸ್ಯ ಸಾಯಬಣ್ಣ ಆಲ್ಯಾಳ, ಶಂಕ್ರಗೌಡ ದೇಸಾಯಿ, ಹಣಮಂತ್ರಯ ಢವಳಗಿ, ಶಂಕ್ರಗೌಡ ನರಸಲಗಿ ಸೇರಿದಂತೆ ಇತರರು ಇದ್ದರು.