ಕಾರವಾರ

ಚಾಲಕರಿಲ್ಲದೇ ತುರ್ತು ಸೇವೆ ನಿಲ್ಲಿಸಿರುವ ಆರೋಗ್ಯ ಕವಚ 108

ಚಾಲಕರಿಲ್ಲದೇ ತುರ್ತು ಸೇವೆ ನಿಲ್ಲಿಸಿರುವ ಆರೋಗ್ಯ ಕವಚ 108

ಗಮನಹರಿಸದ ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರ ಅಕ್ರೋಶ

ಬನವಾಸಿ 06: ಬನವಾಸಿ ಭಾಗಕ್ಕೆ ನೀಡಿರುವ ಆರೋಗ್ಯ ಕವಚ 108 ವಾಹನವೂ ಚಾಲಕರಿಲ್ಲದೇ ಕಳೆದ ಎರಡು ಮೂರು ವಾರಗಳಿಂದ ನಿಂತ ಜಾಗದಲ್ಲಿಯೇ ನಿಂತಿದೆ. ಅಪಘಾತ, ಹೆರಿಗೆ, ತುರ್ತು ಚಿಕಿತ್ಸೆಗಳಂತಹ ಸಂದರ್ಭದಲ್ಲಿ ತ್ವರಿತಗತಿಯಲ್ಲಿ ಸ್ಪಂದಿಸಬೇಕಾದ  ಆರೋಗ್ಯ ಕವಚ ವಾಹನವೂ ಸೇವೆಗೆ ಲಭ್ಯವಾಗದೇ ನಿಂತಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ  ಬನವಾಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆರೋಗ್ಯ ಕವಚ   ವಾಹನದ ಅವಶ್ಯಕತೆಯಿದೆ ಎಂದು ಸರ್ಕಾರವನ್ನು  ಒತ್ತಾಯಿಸಲಾಗಿತ್ತು ಜನರ ಒತ್ತಾಯಕ್ಕೆ ಮಣಿದು ಸರ್ಕಾರ 108 ವಾಹನವನ್ನು ನೀಡಿತ್ತು. ಬನವಾಸಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಿ ಜನ ಸೇವೆ ಪ್ರಾರಂಭಿಸಲಾಯಿತು.  ಆರಂಭದಲ್ಲಿ ಬನವಾಸಿಗೆ ಹೊಸ ವಾಹನ ನೀಡಿದಂತೆ ಮಾಡಿ ನಂತರ ಎರಡೇ ತಿಂಗಳಿಗೆ ಅದನ್ನು ಮುಂಡಗೋಡಿಗೆ ವರ್ಗಾಯಿಸಿ ಬನವಾಸಿಗೆ ಹಳೆಯ ವಾಹನ ನೀಡಿದರು.  ಜನರು ವಿರೋಧ ವ್ಯಕ್ತಪಡಿಸಿದರಾದರೂ ಯಾವುದೇ ಪ್ರಯೋಜನವಾಗದೇ ಹಳೇ ವಾಹನವೇ ಇಲ್ಲಿಯ ತನಕ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಸಂಚಕಾರ ಎಂಬಂತೆ ಬನವಾಸಿಯ ಆರೋಗ್ಯ ಕವಚ 108 ವಾಹನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎರಡೂ ಜನ ಚಾಲಕರನ್ನು ಜಿವಿಕೆ  ಕಂಪನಿಯೂ  ಹಾವೇರಿ ಜಿಲ್ಲೆಗೆ ವರ್ಗಾಯಿಸಿದ್ದರಿಂದ ಚಾಲಕರು ವಾಹನವನ್ನು ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿಗೆ ನಿಲ್ಲಿಸಿ ಹೋಗಿದ್ದಾರೆ. 

ಬನವಾಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ  ಏನಾದರೂ ಅಪಘಾತ, ಹೆರಿಗೆ ನೋವಿನಂತಹ ತುರ್ತು ಅವಘಡಗಳು ಸಂಭವಿಸಿದರೆ ಆರೋಗ್ಯ ಕವಚ 108 ವಾಹನ  ಇದ್ದೂ ಪ್ರಯೋಜನ ಇಲ್ಲದಂತಾಗಿದೆ. ಅಲ್ಲದೇ ಕೋವಿಡ್ ಎರಡನೇ ಅಲೆ ಹರಡುತ್ತಿದ್ದು ಈಗಾಗಲೇ ಸರ್ಕಾರ ಮುನ್ನೆಚ್ಚರಿಕೆ ವಹಿಸುವಂತೆ ಆದೇಶ ಹೊರಡಿಸಿದ್ದರು ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಕಣ್ಮುಚ್ಚಿಕೊಂಡು ಬಡವರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು,  ಜನಪ್ರತಿನಿಧಿಗಳು ಎಚ್ಚೆತ್ತು ಸಮಸ್ಯೆಯನ್ನು ಪರಿಹರಿಸಬೇಕೆನ್ನುವುದೇ ಸಾರ್ವಜನಿಕರ ಆಗ್ರಹವಾಗಿದೆ.

ಬನವಾಸಿಯ ಆರೋಗ್ಯ ಕವಚ 108 ವಾಹನಕ್ಕೆ ಚಾಲಕರು ಇಲ್ಲದೇ ನಿಂತಿರುವುದು ನಮ್ಮ ಗಮನಕ್ಕೆ ಬಂದಿದೆ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಚಾಲಕರನ್ನು ಏಕಾಏಕಿ ಹಾವೇರಿಗೆ ವರ್ಗವಣೆ ಮಾಡಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ಅದಷ್ಟು ಶೀಘ್ರದಲ್ಲಿ ಚಾಲಕರನ್ನು ನೇಮಕ ಮಾಡಿ ಸಮಸ್ಯೆ ಬಗೆಹರಿಸಲಾಗುವುದು.

ಸದಾನಂದ  

ಜಿವಿಕೆ ಪ್ರಾದೇಶಿಕ ಅಧಿಕಾರಿ

ಸುದ್ದಿ ಓದಿ