ಕಾರವಾರ

ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ
ನಾಮಪತ್ರ ಸಲ್ಲಿಸಿದ ಕೃಷ್ಣಮೂರ್ತಿ ಹೆಬ್ಬಾರ

ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರರಿಂದ ಮೊದಲ ನಾಮಪತ್ರ ಸಲ್ಲಿಕೆ 

ಕಾರವಾರ 30: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆ ಮೇ.9 ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ದೊರೆತಿದೆ. ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿದ್ದು, ನಾಮಪತ್ರವನ್ನು ಚುನಾವಣಾಧಿಕಾರಿಯಾಗಿರುವ ಕಾರವಾರ ತಹಶೀಲ್ದಾರ ಆರ್.ವಿ.ಕಟ್ಟಿ ಅವರಿಗೆ ಸಲ್ಲಿಸಿದರು. ಮಾಸ್ತಿ ಗೌಡ ಸೂಚಕರಾಗಿ ಸಹಿ ಮಾಡಿದ್ದು, ಅವರು ಸಹ ನಾಮಪತ್ರ ಸಲ್ಲಿಸುವಾಗ ಜೊತೆಯಿದ್ದರು. ನಾಮಪತ್ರ ಸಲ್ಲಿಸಲು ಎಪ್ರಿಲ್ 7 ಕೊನೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ ಎ.8 ರಂದು ನಡೆಯಲಿದೆ. 

ನಾಮಪತ್ರ ಸಲ್ಲಿಸಿದ ನಂತರ ಹಿರಿಯ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ, ಸಾಹಿತ್ಯ ಲೋಕದಲ್ಲಿ ಪರಿಶುದ್ಧತೆ ಹಾಗೂ ಜಾತಿ ರಹಿತ, ಕುಟುಂಬ ಹಿತದ ಹೊರತಾದ ಅಕ್ಷರ ಲೋಕ ಕಟ್ಟಲು ಯತ್ನಿಸುವೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಹಿರಿಯ ಸಾಹಿತಿ ಆಯ್ಕೆಯಾಗುವಂತೆ ನೋಡಿಕೊಳ್ಳುವುದು ಹಾಗೂ ಸಾಹಿತ್ಯದ ನಿಜವಾದ ಅಕ್ಕರೆ ಬೆಳೆಸುವ ಉದ್ದೇಶ ಹೊಂದಿದ್ದೇನೆ.  ನಾನು ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾದರೆ ಭ್ರಷ್ಟಾಚಾರ ರಹಿತ ಪರಿಷತ್‍ನ್ನು ಕಟ್ಟಿ ತೋರಿಸುವೆ ಎಂದರು. ಎಸ್‍ಡಿಎಂ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಯಾಗಿದ್ದೆ. ಜಿಲ್ಲಾ ವಿದ್ಯಾರ್ಥಿ ಒಕ್ಕೂಟವನ್ನು ಮುನ್ನೆಡೆಸಿದ ಅನುಭವವಿವೆ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಕಲಿಯುವಾಗ ಅಲ್ಲಿ ವಿದ್ಯಾರ್ಥಿ ಸಂಘಟನೆಯ ಜನರಲ್ ಸೆಕ್ರೆರಟ್ರಿಯಾಗಿ ಕೆಲಸ ಮಾಡಿದ ಅನುಭವವಿದೆ. ಜಿಲ್ಲೆಯ ಅನೇಕ ಜನಪರ ಕಾಳಜಿಯ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ನಾಗರಿಕ ಪತ್ರಿಕೆ ಮಾಡಿಕೊಂಡು ಜನರ ಮಧ್ಯೆ ಇದ್ದೇನೆ, ಇದನ್ನು ಅಕ್ಷರಲೋಕ ಪರಿಗಣಿಸಲಿದೆ ಎಂದು ಭಾವಿಸಿದ್ದೇನೆ. ಜಿಲ್ಲಾ ಪ್ರವಾಸ ಮಾಡಿ, ಪರಿಷತ್ ಸದಸ್ಯರ ಮತಯಾಚಿಸುವೆ ಎಂದರು. 

ಸುದ್ದಿ ಓದಿ