ಸರ್ವಋತು ರಸ್ತೆ ನಿರ್ಮಾಣಕ್ಕೆ ಯತ್ನ : ಅಧಿಕಾರಿಗಳೊಂದಿಗೆ ಚರ್ಚೆ; ಸಚಿವ ಪಾಟೀಲ್
ಕಾರವಾರ : ಕಳಚೆ ಹಾಗೂ ಅರಬೈಲ್ ಘಟ್ಟದಲ್ಲಿ ಸರ್ವಋತು ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ಆರ್ಥಿಕ ಇಲಾಖೆಯಿಂದ ಹೆಚ್ಚಿನ ಅನುದಾನ ಪಡೆಯಲು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಪಿ ಡಬ್ಲ್ಯೂ ಡಿ ಸಚಿವ ಸಿ.ಸಿ ಪಾಟೀಲ ಹೇಳಿದರು.
ಸೋಮವಾರ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮಕ್ಕೆ ಭೇಟಿ ನೀಡಿದ ಅವರು ಅತಿವೃಷ್ಟಿಯಿಂದ ಭೂ ಕುಸಿತವಾದ ಪ್ರದೇಶವನ್ನು ಸಚಿವ ಶಿವರಾಮ ಹೆಬ್ಬಾರರ ಜೊತೆಗೆ ಪರೀಶೀಲನೆ ನಡೆಸಿದರು.
ನಂತರ ಕಳಚೆ ಗ್ರಾಮಸ್ಥರ ಮನವಿಪತ್ರವನ್ನು ಸ್ವೀಕರಿಸಿ ಮಾತನಾಡಿ, ಬೆಂಗಳೂರಿನಿಂದ ನಿರ್ಣಯ ತೆಗೆದುಕೊಳ್ಳುದಕ್ಕೂ ಹಾಗೂ ಕಳಚೆಗೆ ಭೇಟಿ ನೀಡಿ , ಪರೀಶೀಲಿಸಿ ನಿರ್ಣಯ ತೆಗೆದುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಈಗಾಗಲೇ ಮುಖ್ಯಮಂತ್ರಿಯವರು ಜಿಲ್ಲೆಯ ನೆರೆ ಪೀಡಿತ ಹಾಗೂ ಭೂ ಕುಸಿತ ಸ್ಥಳಗಳನ್ನು ಪರೀಶೀಲಿಸಿ ಜಿಲ್ಲೆಗೆ 210 ಕೋಟಿ ಅನುದಾನ ನೀಡಿದ್ದಾರೆ. ಸಚಿವ ಶಿವರಾಮ್ ಹೆಬ್ಬಾರ್ ಅವರಿಂದ ರಸ್ತೆಯ ದುಸ್ಥಿತಿ ಪ್ರದೇಶ ಹಾಗೂ ಭೂಕುಸಿತ ಪ್ರದೇಶಗಳಲ್ಲಿ ಕಾಮಗಾರಿ ಭರದಿಂದ ಸಾಗುತಿದ್ದು, ಪಿ ಡಬ್ಲ್ಯೂ ಡಿ ಇಲಾಖೆಯಿಂದ ಕಳಚೆ ಗ್ರಾಮಕ್ಕೆ ಹಾಗೂ ಹಾನಿಯಾದ ಪ್ರದೇಶದಲ್ಲಿ ಸರ್ವಋತು ರಸ್ತೆ ನಿರ್ಮಾಣ ಮಾಡಲಾಗುವುದು ಹಾಗೂ ಕಾಮಗಾರಿ ಗುಣಮಟ್ಟದಲ್ಲಿ ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದರು.
ಸಚಿವ ಶಿವರಾಮ್ ಹೆಬ್ಬಾರ್ ಮಾತನಾಡಿ ಜನರು ಭಯ ಪಡುವ ಅಗತ್ಯವಿಲ್ಲ. ಆದಷ್ಟು ಬೇಗ ಮೂಲಸೌಕರ್ಯ ಹಾಗೂ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಈಗಾಗಲೇ ರಸ್ತೆ ರಿಪೇರಿ ಕೆಲಸ ನಡೆದಿದೆ. ಚೌತಿ ನಂತರ ಇದಕ್ಕೆ ವೇಗ ದೊರೆಯಲಿದೆ ಎಂದರು.
ಜಿಲ್ಲೆಗೆ ಆಗಮಿಸಿದ ರಾಜ್ಯ ಲೋಕೋಪಯೋಗಿ ಖಾತೆ ಸಚಿವರ ಸಹಕಾರ ಎಂದೂ ಮರೆಯಲಾರೆ. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಚಿವ ಸಿಸಿ ಪಾಟೀಲರಿಂದ ಬಹುದೊಡ್ಡ ಉಪಕಾರವಾಗಿದೆ. ಅವರು ನನ್ನ ಕ್ಷೇತ್ರಕ್ಕೆ ಮಾಡಿದ ನೆರವು ದೊಡ್ಡದು. ಜನರಿಗೆ ಇದರಿಂದ ಅನುಕೂಲವಾಗಲಿದೆ. ಜನರು ಸಹ ಸಿಎಂ ಹಾಗೂ ಲೋಕೋಪಯೋಗಿ ಮಂತ್ರಿಗಳು ಮಾಡಿದ ಸಹಾಯವನ್ನು ಮರೆಯುವುದಿಲ್ಲ ಎಂದರು. ಹಾಗೂ ಜಿಲ್ಲೆಯ ಅರಣ್ಯ ಅಧಿಕಾರಿಗಳು ರಸ್ತೆ ತೆರವು ಕಾರ್ಯದಲ್ಲಿ ಸಾಕಷ್ಟು ಶ್ರಮಿಸಿದ್ದು ಎಲ್ಲರಿಗೂ ಕೃತಜ್ಞತೆಗಳು ಎಂದರು.
ಸಚಿವ ಪಾಟೀಲರ ಜೊತೆಗೆ ಶಿರಸಿಯ ಸಹಾಯಕ ಆಯುಕ್ತರಾದ ಆಕೃತಿ ಬನ್ಸಾಲ್, ಯಲ್ಲಾಪುರ ಮತ್ತು ಶಿರಸಿ ತಾಲೂಕಿನ ತಹಶೀಲ್ದಾರ್‌ರು ಹಾಗೂ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದು ಅಗತ್ಯ ಮಾಹಿತಿ ನೀಡಿದರು.