ಶಿಗ್ಗಾವ್

'ಶಿಕ್ಷಣ ವಿದ್ಯಾರ್ಥಿಗಳ ಬಹುಮುಖ ವ್ಯಕ್ತಿತ್ವವನ್ನು ರೂಪಿಸುವ ಸಾಧನವಾಗಲಿ'

'ಶಿಕ್ಷಣ ವಿದ್ಯಾರ್ಥಿಗಳ ಬಹುಮುಖ ವ್ಯಕ್ತಿತ್ವವನ್ನು ರೂಪಿಸುವ ಸಾಧನವಾಗಲಿ'

ಶಿಗ್ಗಾವಿ 16: ಶಿಕ್ಷಣ ವಿದ್ಯಾರ್ಥಿಗಳ ಬಹುಮುಖ ವ್ಯಕ್ತಿತ್ವವನ್ನು ರೂಪಿಸುವ ಸಾಧನವಾಗಬೇಕು ಇಂದಿನ ಸಂಕೀರ್ಣಮಯ ಸನ್ನಿವೇಶದಲ್ಲಿಯೂ ವಿದ್ಯಾರ್ಥಿಗಳು ಹೊಸಕಾಲದ ಆವಿಷ್ಕಾರಗಳಿಗೆ ತಕ್ಕಂತೆ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹಾವೇರಿ ಎಂ. ಆರ್. ಎಂ. ಕಾಲೇಜಿನ ಪ್ರಾಚಾರ್ಯ ರಾಮ್ ಮೋಹನರಾವ್ ಹೇಳಿದರು

ಪಟ್ಟಣದ ಚನ್ನಪ್ಪ ಕುನ್ನೂರ ಕಾಲೇಜಿನಲ್ಲಿ ಏರ್ಪಡಿಸಲಾದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಾಲಾ ಪಠ್ಯಕ್ರಮ ಕೇವಲ ಅಂಕಗಳಿಕೆಯ ಮಾನದಂಡವಾಗಬಾರದು ಬದುಕನ್ನು ರೂಪಿಸುವ ಮಾರ್ಗವಾಗಬೇಕು ಎಂದು ಅಭಿಪ್ರಾಯಪಟ್ಟ ಅವರು ವಿದ್ಯಾರ್ಥಿ ಜೀವನ ಬಹಳ ಮೌಲ್ಯಯುತವಾದುದು ಈ ಜೀವನವನ್ನು ಸಮರ್ಥವಾಗಿ ಸದ್ಭಳಕೆ ಮಾಡಿಕೊಂಡು ಸುಂದರ ಬದುಕನ್ನು ನಿರ್ಮಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ ವಿದ್ಯಾರ್ಥಿಗಳಲ್ಲಿ ಸ್ನೇಹ ಸೌಹಾರ್ಧದ ಮನೋಭಾವ ಬೆಳೆದು ಬರುವುದು ಇಂದಿನ ಅವಶ್ಯಕತೆಯಾಗಿದೆ ಈ ನಿಟ್ಟಿನಲ್ಲಿ ಪ್ರಾಚೀನ ಕಾವ್ಯಗಳ ಅಧ್ಯಯನ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯವನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು

ರಂಭಾಪುರಿ ಕಾಲೇಜಿನ ಪ್ರಾಚಾರ್ಯ ಎಫ್. ಎಸ್. ಶಿವಣ್ಣವರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪುಷ್ಪ ನೀಡುವ ಮೂಲಕ ಸ್ವಾಗತಿಸಿದರು. 2019-20 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದು ಪಾಸಾದ ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಜಿ. ಎಂ. ಅರಗೋಳ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸಿ. ಟಿ. ಪಾಟೀಲ, ಪ್ರೊ. ಅನ್ನಪೂರ್ಣ ಅಂಕಲಕೋಟಿ, ಪ್ರೊ. ಸುಮಿತ್ರಾ ರಾಮಾಪೂರಮಠ, ಪ್ರೊ. ಉಮೇಶ ತಳವಾರ ಮುಂತಾದವರು ಪಾಲ್ಗೊಂಡಿದ್ದರು.

ಡಾ. ಕೆ. ಎಸ್. ಬರದೇಲಿ ಸ್ವಾಗತಿಸಿದರು. ಪ್ರೊ. ಕೆ ಬಸಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಂ. ಎಸ್. ಕುರಂದವಾಡ ವಂದಿಸಿದರು. ಪ್ರೊ. ಕೆ. ಸಿ. ಹೂಗಾರ ನಿರೂಪಿಸಿದರು.

ಸುದ್ದಿ ಓದಿ