ಕಾರವಾರ

ತೀವ್ರ ಸಮಸ್ಯೆಯಿಂದ ಕೂಡಿದ ಶಿಕ್ಷಣ ಕ್ಷೇತ್ರ: ಬಸವರಾಜ ಹೊರಟ್ಟಿ

ತೀವ್ರ ಸಮಸ್ಯೆಯಿಂದ ಕೂಡಿದ ಶಿಕ್ಷಣ ಕ್ಷೇತ್ರ: ಬಸವರಾಜ ಹೊರಟ್ಟಿ

ಮುಂಡಗೋಡ: ಸಮಾಜ ಇಂದು ತೀವ್ರ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಶಿಕ್ಷಣ ಕ್ಷೇತ್ರವಂತೂ ತೀವ್ರ ಸಮಸ್ಯೆಯಿಂದ ಕೂಡಿದೆ. ಶಿಕ್ಷಣ ಪದ್ದತಿಯಿಂದ ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಸೇರಿದಂತೆ ಯಾರು ಕೂಡ ನೆಮ್ಮದಿಯಿಂದ ಇಲ್ಲ ಅಷ್ಟೊಂದು ಸಮಸ್ಯೆಗಳು ಉದ್ಬವವಾಗಿವೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. 

ಮಂಗಳವಾರ ಇಲ್ಲಿಯ ನಗರ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಮುಂಡಗೋಡ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನಾ ಸಮಾರಂಭ ಮತ್ತು ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಇಂದಿನ ಶಿಕ್ಷಣದಲ್ಲಿ ಸಂಸ್ಕಾರದ ಕೊರತೆ ಇದೆ. ತಂದೆ ತಾಯಿಗಳು ಪಡುವ ಕಷ್ಟಗಳ ಬಗ್ಗೆ ಮಕ್ಕಳಿಗೆ ತಿಳಿದರೆ ಮಾತ್ರ ಸಮಾಜ ಹಾಗೂ ಜೀವನ ಎಂದರೇನು ಎಂಬ ಅರಿವು ಮಕ್ಕಳಲ್ಲಿ ಬರುತ್ತದೆ. ಮಕ್ಕಳನ್ನು ವಸತಿ ಶಾಲೆಗಳಲ್ಲಿಟ್ಟು ಶಿಕ್ಷಣ ನೀಡುವ ಪದ್ದತಿಯಿಂದ ಮಕ್ಕಳಲ್ಲಿ ಸಂಸ್ಕಾರದ ಕೊರತೆಯಾಗಲು ಕಾರಣವಾಗಿದೆ.  

ಬೇರೆ ಬೇರೆ ದೇಶಗಳಲ್ಲಿ ಸರ್ಕಾರಗಳು ಬದಲಾಗುತ್ತವೆ ವಿನಹ ನೀತಿ ಬದಲಾಗುವುದಿಲ್ಲ. ನಮ್ಮ ದೇಶದಲ್ಲಿ ಸರ್ಕಾರದ ಜೊತೆ ಜೊತೆಗೆೆ ಸರ್ಕಾರದ ನೀತಿಗಳು ಬದಲಾಗುತ್ತವೆ. ಒಂದೊಂದು ಸರ್ಕಾರದಲ್ಲಿ ಒಂದೊಂದು ನೀತಿಗಳು ಜಾರಿಯಾಗುವುದರಿಂದ ಶಿಕ್ಷಣ ಕ್ಷೇತ್ರ ತೊಂದರೆ ಅನುಭವಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.  

ಅತ್ತಿವೇರಿ ಬಸವ ಧಾಮದ ಮಾತೆ ಬಸವೇಶ್ವರಿ ದಿವ್ಯ ಸಾನಿದ್ಯವಹಿಸಿ ಮಾತನಾಡಿ, ಶಿಕ್ಷಕರು ಹಾಗೂ ಬಸವರಾಜ ಹೊರಟ್ಟಿ ಅವರ ನಡುವೆ ಅವಿನಾಭಾವ ಸಂಬಂಧವಿದೆ. ಶಿಕ್ಷಕರ ಸಂಘಟನೆಯಲ್ಲಿ ಶಕ್ತಿ ಇದೆ ಎಂಬುವುದನ್ನು ಬಸವರಾಜ ಹೊರಟ್ಟಿಯವರು ತೋರಿಸಿಕೊಟ್ಟಿದ್ದಾರೆ. 7 ಭಾರಿ ಶಿಕ್ಷಕರ ಕ್ಷೇತ್ರದಿಂದ ಸ್ಪರ್ದಿಸಿ ಗೆಲುವು ಸಾದಿಸುವುದು ದಾಖಲೆಯೇ ಸರಿ. ದಕ್ಷ, ಚಿಂತಕ ಹಾಗೂ ಯಾವುದೇ ಕಪ್ಪು ಚುಕ್ಕೆ ಇಲ್ಲದಂತ ಬಸವರಾಜ ಹೊರಟ್ಟಿ ಅವರ ಬಗ್ಗೆ ಶಿಕ್ಷಕರಿಗೂ ಕೂಡ ಪ್ರೀತಿ ಗೌರವವಿದೆ. 45 ವರ್ಷಗಳ ಕಾಲ ಹೋರಾಟದ ಮೂಲಕ ಗುರುತಿಸಿಕೊಂಡವರು. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ್ದು, ಶಿಕ್ಷಕರು ಮನಸ್ಸು ಮಾಡಿದರೆ ಭವ್ಯ ಭಾರತ ನಿರ್ಮಾಣ ಮಾಡಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿರುವುದು ಶೋಚನಿಯ ಎಂದರು. 

ಧಾರವಾಡ ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ ಬಾಧಕಗಳ ಬಗ್ಗೆ ಉಪನ್ಯಾಸ ನೀಡಿದರು. ಶಿರಸಿ ಶೈಕ್ಷಣಿಕ ಜಿಲ್ಲೆ ಉಪ ನಿರ್ದೇಶಕ ದಿವಾಕರ ಶೆಟ್ಟಿ, ತಹಸೀಲ್ದಾರ ಶ್ರೀಧರ ಮುಂದಲಮನಿ, ಲೋಯೋಲಾ ಶಾಲೆ ಪ್ರಾಧ್ಯಾಪಕ ಜಾನ್ಸನ್ ಪಿಂಟೊ, ವಿ.ವಿ ನಡುವಿನಮನಿ ಮುಂತಾದವರು ಮಾತನಾಡಿದರು. ವಿನಾಯಕ ಶೇಟ್ ಪ್ರಾಸ್ಥಾವಿಕ ಮಾತನಾಡಿದರು. ಎಸ್‌.ಡಿ ಮುಡೆಣ್ಣವರ ಸ್ವಾಗತಿಸಿದರು. ಸುರೇಶ ಪೂಜಾರ, ರಮೇಶ ಅಂಬಿಗೇರ ನಿರೂಪಣೆ ಮಾಡಿದರು. 


ಸುದ್ದಿ ಓದಿ