ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಒಂದೇ ದಾರಿ
ಕಾರವಾರ: ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಒಂದೇ ದಾರಿ. ಹೆಣ್ಣು ಮಕ್ಕಳಿಗೆ ಹೆಚ್ಚು ಹೆಚ್ಚು ಶಿಕ್ಷಣ ನೀಡುವ ಮೂಲಕ ಅವರನ್ನು ಆರ್ಥಿಕ ಸಬಲರನ್ನಾಗಿ ಮಾಡಬಹುದು, ಸ್ವಾವಲಂಬಿಗಳನ್ನಾಗಿ ಮಾಡಬಹುದು ಎಂದು ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕಿ ಲಕ್ಷ್ಮಿ ರಾಮನಾಥ ಅಭಿಪ್ರಾಯಪಟ್ಟರು.
ಜನ ಶಿಕ್ಷಣ ಸಂಸ್ಥಾನ ಕಾರವಾರ ಹಾಗೂ ಕೆನರಾ ಬ್ಯಾಂಕ್ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ನಡೆದ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರನ್ನು ಸಹ ಪುರುಷರಂತೆ ಸಮಾನರು ಎಂದು ನೋಡುವ ದಿನಗಳು ಬರಬೇಕು, ಆಗ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದರು.
ಸರ್ಕಾರಿ ಕಲಾ ಮತ್ತು ವಿಜ್ಞಾನ ಪದವಿ (ಸ್ವಾಯತ್ತ) ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ವಿಜಯಾ ಡಿ. ನಾಯ್ಕ ಮುಖ್ಯ ಅತಿಥಿಯಾಗಿ ಮಾತನಾಡಿ ಪುರುಷರ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿದೆ. ಆದರೆ ಮಹಿಳೆಯನ್ನು ನೋಡುವ ದೃಷ್ಟಿಕೋನ ಭಾರತೀಯ ಸಮಾಜದಲ್ಲಿ ಬದಲಾಗಿಲ್ಲ. ಹನ್ನೆರಡನೇ ಶತಮಾನದಲ್ಲಿ ಮಹಿಳೆಯನ್ನು ಸಮಾನತೆಯ ದೃಷ್ಟಿಯಿಂದ ನೋಡುವ ಚಳುವಳಿ ಆರಂಭವಾಯಿತು, ಆದರೆ ತದನಂತರ ಕಾಲದಲ್ಲಿ ಮಹಿಳೆಯ ಸ್ಥಿತಿಗತಿಗಳು ಬದಲಾಗಿಲ್ಲ. ಸ್ವತಂತ್ರ ಭಾರತದಲ್ಲಿ ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳು ತೆರೆದುಕೊಂಡವು. ಆದರೂ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರ ಸ್ಥಿತಿಗತಿ ಮತ್ತು ರೈತ ಕುಟುಂಬದಲ್ಲಿ ಮಹಿಳೆಯ ಸ್ಥಾನ ಮಾನಗಳ ಸಂಘರ್ಷ ನಡೆದೇ ಇದೆ. ಮಹಿಳೆಯನ್ನು ಒಳಗೊಳ್ಳುವಿಕೆ ಮುಖ್ಯವಾದುದು. ಅಧಿಕಾರಸ್ಥ ಸ್ಥಾನಗಳಲ್ಲಿ ಸೂಕ್ಷ್ಮ ಸಂವೇದನೆಯ ಮಹಿಳೆ ಕೆಲಸ ಮಾಡುವಲ್ಲಿ ಅನೇಕ ಯಶಸ್ಸಿನ ಕತೆಗಳು ನಮ್ಮಲ್ಲಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಿಶೋರ ರಾಣೆ ಮಾತನಾಡಿ ಮಹಿಳೆ ಕೌಶಲ್ಯಾಧಾರಿತ ಶಿಕ್ಷಣ ಪಡೆದರೆ ಸಬಲೀಕರಣ ಸಾಧ್ಯ ಎಂದರು. ಎಲ್ಲಾ ಆಯಾಮಗಳಲ್ಲಿ ನಾವು ಮಹಿಳೆಯರನ್ನು ಬೆಂಬಲಿಸಬೇಕಿದೆ ಎಂದು ಅವರು ಹೇಳಿದರು. ನಿವೃತ್ತ ಶಿಕ್ಷಕಿ ಪುಷ್ಪಾ ನಾಯ್ಕ, ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ವೈಶಾಲಿ ತಿಲೇಕರ, ಜನ ಶಿಕ್ಷಣ ಸಂಸ್ಥಾನದ ರಾಧಾ ಎಸ್.ನಾಯ್ಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ ಗಂಗಾ ಮಹೇಕರ,ಉದ್ಯಮಿ ಅಮಿನಾ ಬಿ,ನಧಾಪ್ ಅವರನ್ನು ಸನ್ಮಾನಿಸಲಾಯಿತು. ಜನ ಶಿಕ್ಷಣ ಸಂಸ್ಥಾನದ ಕಾರ್ಯಕ್ರಮ ಅಧಿಕಾರಿ ಉಷಾ ದುರ್ಗೇಕರ ಸ್ವಾಗತಿಸಿದರು. ರಿಂಕಲ್ ಥಾಮ್ಸೆ ವಂದಿಸಿದರು. ಪ್ರಕಾಶ್ ತಳೇಕರ್ ಕಾರ್ಯಕ್ರಮ ನಿರೂಪಿಸಿದರು. ಶುಭಾಂಗಿ ಶಿರೋಡಕರ್, ನಾಗರಾಜ ಶೇಟ್ ಉಪಸ್ಥಿತರಿದ್ದರು.