ಸಮಾನತೆ ಸಾಧಿಸಲು ಶಿಕ್ಷಣ ಒಂದೇ ತಾರಕ ಮಂತ್ರ -ನ್ಯಾಯಾಧೀಶ ಕಮತೆ
ರಾಣೀಬೆನ್ನೂರ. 20: ಭಾರತೀಯರು ಇಂದು ಎಲ್ಲ ರಂಗಗಳಲ್ಲಿ ಸಮಾನತೆ ಸಾಧಿಸುತ್ತಿರುವುದಾದರೆ ಅದಕ್ಕೆ ಡಾ.ಅಂಬೇಡ್ಕರ ಅವರು ನೀಡಿರುವ ಸಂವಿಧಾನ ಪ್ರಮುಖ ಕಾರಣವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾವುಗಳು ಇಂದು ಪಡೆಯುತ್ತಿರುವ ಹಕ್ಕಿನ ಜೊತೆಗೆ ಸಮಾಜಕ್ಕೆ ನಾವು ಕೊಡಬೇಕಾದ ಕರ್ತವ್ಯಗಳನ್ನು ಸಹ ಅರಿತುಕೊಂಡಾಗ ಮಾತ್ರ ಅಸಮಾನತೆ ತೊಲಗಿಸಿ ಸಮಾನತೆಯನ್ನು ಸಾಧಿಸಲು ಸಾಧ್ಯವಾಗುವುದು ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ರಾಜೇಶ ಎಂ.ಕಮತೆ ಹೇಳಿದರು.
ಅವರು ಶನಿವಾರ ಇಲ್ಲಿನ ಉರ್ದು ಹೈಸ್ಕೂಲ್ ಆವರಣದ ಶಾದಿ ಮಹಲ್ನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ನ್ಯಾಯವಾದಿಗಳ ಸಂಘ ಹಾಗೂ ಅಂಜುಮನ್-ಎ-ಇಸ್ಲಾಂ ಸಂಸ್ಥೆ ಆಯೋಜಿಸಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾನೂನು ಅರಿವು-ನೆರವು ಕಾರ್ಯಕ್ರ ಉದ್ಘಾಟಿಸಿ ಮಾತನಾಡಿದರು. ಕಾನೂನು ಎಲ್ಲರಿಗೂ ಒಂದೇ ಕನಿಷ್ಠ ಕಾನೂನಿನ ಜ್ಞಾನವನ್ನು ಪಡೆದರೆ ಯಾವುದೇ ಕಾನೂನು ಬಾಹೀರ ಚಟುವಟಿಕೆಗಳು ನಡೆಯುವುದಿಲ್ಲ. ಮಕ್ಕಳು ತಮ್ಮ ಶಿಕ್ಷಣದ ವ್ಯವಸ್ಥೆಯಲ್ಲಿ ಅರಿತುಕೊಳ್ಳಬೇಕಾದ ಕೆಲ ವಿಚಾರಗಳನ್ನು ತಿಳಿಯಲೇಬೇಕಾಗುತ್ತದೆ. ಅದರಲ್ಲಿ ಲೈಸನ್ಸ್ ಪಡೆಯದೆ ವಯೋಮಿತಿಯು ಆಗದೇ ವಾಹನ ಹತ್ತಬಾರದು, ಸುಳ್ಳು, ಕಳ್ಳತನ, ಮೋಸ, ವಂಚನೆ ಮಾಡಬಾರದು, ಸುತ್ತಮುತ್ತಲೂ ನಡೆಯುವ ಕಾನೂನುಬಾಹೀರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುವುದರ ಮೂಲಕ ಅಷ್ಟೇ ಸೂಕ್ಷ್ಮವಾಗಿ ತಿಳಿಸುವುದು ಸಹ ಆದ್ಯ ಕರ್ತವ್ಯವಾಗಿದೆ. ಮಕ್ಕಳು ಈ ದೇಶದ ಭವಿಷ್ಯದ ನಾಗರೀ ಕರು, ಶಿಕ್ಷಣ ಪಡೆಯುವುದರ ಜೊತೆಗೆ ಸಾಮಾಜಿಕ ಅರಿವನ್ನು ಮೈಗೂಡಿಸಿಕೊಂಡು ಕಾನೂನಿಗೆ ಸಹಕಾರಿಯಾಗುವ ರಾಯಬಾರಿ ಗಳಾಗಬೇಕು ಎಂದರು.
ಭಾರತದಲ್ಲಿ ಜನ್ಮ ತಾಳಿದ ನಾವುಗಳು ಭಾರತೀಯ ಪ್ರಜೆಗಳಾಗಿ ಇಲ್ಲಿನ ನೆಲದ ಕಾನೂನಿಗೆ ಗೌರವ ನೀಡುವುದರ ಜೊತೆಗೆ ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸ ಮತ್ತು ಅಭಿಮಾನದಿಂದ ಬಾಳಿ ಬದುಕಬೇಕು. ಇದು ಭಾರತೀಯರ ಸಂಸ್ಕೃತಿಯ ಪರಂಪರೆಯಾಗಿದೆ ಎಂದ ಅವರು ಭಾಷೆ ಯಾವುದೇ ಇರಲಿ ಭಾವನಾತ್ಮಕ ಸಂಬಂಧ ಮತ್ತು ಸಂಹವನ ಬಹಳ ಮುಖ್ಯವಾಗುತ್ತದೆ. ಮನೆಯಲ್ಲಿ ಇರುವ ಮಕ್ಕಳನ್ನು ಆರಂಭದಲ್ಲಿಯೇ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದಾಗ ಸಮಾಜ ಅವರನ್ನು ಸದಾಕಾಲ ಗೌರವಿಸುತ್ತದೆ. ಶಿಕ್ಷಣ ವಂಚಿತರಾದರೆ ಅವರನ್ನು ನೋಡುವ ದೃಷ್ಠಿಯೇ ಬೇರೆಯಾಗುತ್ತದೆ ಅದಕ್ಕೆ ಅವಕಾಶ ನೀಡದೇ ಪಾಲಕರು ಹೆಣ್ಣು-ಗಂಡು ಭೇದ-ಭಾವ ತೋರದೆ ಸಮಾನವಾಗಿ ಶಿಕ್ಷಣವಂತರನ್ನಾಗಿ ಮಾಡಲು ಮುಂದಾಗಬೇಕು ಎಂದು ಸಮುದಾಯಕ್ಕೆ ಕರೆನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತಾಧಿಕಾರಿ ಅಮಾನುಲ್ಲಾ ಪಿ.ಹಾವೇರಿ ಅವರು ವಾಣಿಜ್ಯ ನಗರದಲ್ಲಿ ಸ್ಥಾಪಿತವಾಗಿರುವ ಶಿಕ್ಷಣ ಸಂಸ್ಥೆ ಬಡವರು-ಶ್ರೀಮಂತರು ಎನ್ನುವ ಭೇದ-ಭಾವ ಎಣಿಸದೇ ಎಲ್ಲರಿಗೂ ಸಮಾನವಾಗಿ ಶಿಕ್ಷಣ ನೀಡಬೇಕೆನ್ನುವ ಮಹದುದ್ದೇಶ ಹೊಂದಿದೆ. ವಿಶೇಷವಾಗಿ ಬಡಮಕ್ಕಳು ಶಿಕ್ಷಣ ವಂಚಿತರಾಗಬಾರದು ಎನ್ನುವ ಕಾರಣದಿಂದ ಅವರಿಗಾಗಿಯೇ 5ಲ.ರೂ.ಗಳ ವಿಶೇಷ ಧನವನ್ನು ತೆಗೆದಿರಿಸಿಕೊಂಡು ಅವರ ಪ್ರವೇಶ ಶುಲ್ಕವೂ ಸಹ ಸಂಸ್ಥೆ ಭರಿಸುತ್ತಲಿದೆ. ಮುಂದಿನ ದಿನಮಾನಗಳಲ್ಲಿ ಸಂಸ್ಥೆ ವಿಜ್ಞಾನ ವಿಭಾಗವನ್ನು ಸಹ ಪ್ರಾರಂಭಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದ ಅವರು ಅಸಮಾನತೆಯಿಂದ ಸಮಾನತೆಗೆ ತರುವುದೇ ತಮ್ಮ ಶಿಕ್ಷಣ ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಯೋಗೇಶ ಜೆ., ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್.ಬುರಡಿಕಟ್ಟಿ, ಉಪಾಧ್ಯಕ್ಷ ಕುಮಾರ ಡಿ.ಮಡಿವಾಳರ, ಕಾರ್ಯದರ್ಶಿ ಗಣೇಶ ಮುಂಡಾಸದ, ಮಹಾವಿದ್ಯಾಲಯದ ಪ್ರಾಚಾರ್ಯ ಐ.ಎಂ.ಹಿತ್ತಲಮನಿ, ಪ.ಪೂ.ಕಾಲೇಜು ಪ್ರಾಚಾರ್ಯ ಎಂ.ಡಿ.ಪಾಟೀಲ, ಉರ್ದು ಪ್ರೌಢಶಾಲೆಯ ಎ.ಎಂ.ಹರಿಹರ ಸೇರಿದಂತೆ ಮತ್ತಿತರ ಗಣ್ಯರು ಮಾತನಾಡಿದರು.
ನಿವೃತ್ತ ಪ್ರಾಂಶುಪಾಲ ಎ.ಎಂ.ಹಾವನೂರ ಅವರು ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕುರಿತಂತೆ ಸಾದ್ಯಾಂತವಾಗಿ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ವಕೀಲರಾದ ಸುಮಾ ಸಾವಕಾರ, ಅನುಪಮಾ ಕಣವಿ, ನಾಗರತ್ನಾ ಮುಗಳಿಶೆಟ್ಟರ, ಜಿ.ಎಂ.ಮಹಾದೇವಿ, ಕವಿತಾ ಮುಂಡಾಸದ, ಎಂ.ಟಿ.ಬೇಲೂರು, ಬಿ.ಆರ್.ಮಡಿವಾಳರ, ಎಂ.ಬಿ.ಜಾಡರ, ಎನ್.ವಿ.ಸಂದ್ಯಾಳ, ಆರ.ಪಿ.ಎರೇಸೀಮಿ, ಸಿ.ಟಿ.ಬಾಳನಗೌಡ್ರ, ಯು.ಎಸ್.ಬಾವಡೆ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಎಂ.ಎ.ಖತೀಬ ಪ್ರಾರ್ಥಿಸಿ, ಉಪನ್ಯಾಸಕಿ ಬಿ.ಕೆ.ಪ್ರಿಯದರ್ಶಿನಿ ಸ್ವಾಗತಿಸಿ, ನ್ಯಾಯವಾದಿ ಸಲೀಂ ಎಂ.ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಹಾಗೂ ನ್ಯಾಯಾಧೀಶರು ರಾಷ್ಟ್ರೀಯ ಭಾಷೆ ಬಹುತೇಕ ಹಿಂದಿಯಲ್ಲಿಯೇ ಮಾತನಾಡಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕಾನೂನು ಸೇವಾ ಸಮಿತಿಯ ಉದ್ದೇಶಿತ ಯೋಜನೆಯ ಕಾನೂನಿನ ಪರಿಪೂರ್ಣ ಅರಿವು ಮೂಡಿಸುವಲ್ಲಿ ಸಫಲತೆ ಕಂಡಿದ್ದು ವಿಶೇಷವಾಗಿತ್ತು.