ಅದ್ದೂರಿಯಿಂದ ಸತ್ತಿಗೇರಿ ಗ್ರಾಮದಲ್ಲಿ ದ್ಯಾಮವ್ವಾದೇವಿ ಜಾತ್ರೆ

ಯರಗಟ್ಟಿ 15: ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ದ್ಯಾಮವ್ವಾದೇವಿ ಜಾತ್ರೆಯ ಸಡಗರ ಸಂಭ್ರಮ ಮನೆ ಮಾಡಿದೆ.  

5 ವರ್ಷಗಳ ನಂತರ ನಡೆಯುತ್ತಿರುವ ವಿಶೇಷ ಜಾತ್ರೆಯ ಸವಿಗಳಿಗೆಯಲ್ಲಿ ಅಬಾಲವೃದ್ಧರಾಗಿ ಎಲ್ಲರೂ ಮಿಂದೇಳುತ್ತಿದ್ದಾರೆ. ಅಲ್ಲದೇ ಸತ್ತಿಗೇರಿ ಗ್ರಾಮ ಸಂಪೂರ್ಣ ಶೃಂಗಾರಗೊಂಡಿದ್ದು, ಬೀಗರು, ಸಂಬಂಧಿಕರು, ಉದ್ಯೋಗ ಆರಿಸಿ ಹೋದವರು, ಮಿತ್ರರು ಪರಿಚಯಿಸ್ಥರು, ಎಲ್ಲರೂ ಮತ್ತೆ ಊರ ಕಡೆಗೆ ಮುಖ ಮಾಡಿದ್ದು ಪರಸ್ಪರ ಕುಶಲೋಪರಿ ಹಂಚಿಕೊಳ್ಳುತ್ತಿರುವ ದೃಶ್ಯ ಗ್ರಾಮದಲ್ಲಿ ಸಾಮಾನ್ಯವಾಗಿದೆ. 

ಜಾತ್ರೆ ಆರಂಭವಾಗಿ 3 ದಿವಸಗಳ ಕಳೆದರೂ ಸಡಗರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಕ್ತರ ದಂಡು ನಿತ್ಯ ಸಾವಿರಾರೂ ಸಂಖ್ಯೆಯಲ್ಲಿ ಬಂದು ದೇವಿಗೆ ಉಡಿ ತುಂಬಿ ಹರಕೆ ಹರಿಸುವಂತೆ ಬೇಡುತ್ತಿದ್ದಾರೆ. 

ಗ್ರಾಮದಲ್ಲಿ ದೇವಿ ಹೊನ್ನಾಟವಾಡುತ್ತಾ ಮನೆ ಮನೆಯಲ್ಲಿ ಉಡಿ ತುಂಬಿಸಿಕೊಳ್ಳುವ ಕಾರ್ಯಕ್ರಮ ಅದ್ದೂರಿಯಿಂದ ನಡೆಯುತ್ತಿರುವ ದೃಶ್ಯವನ್ನು ಜನ ಕಣ್ಣತುಂಬಿಕೊಂಡರು.