ದುಡಿಯೋಣ ಬಾ ಜಾಗೃತಿ ಅಭಿಯಾನಕ್ಕೆ ಚಾಲನೆ
ರಾಣಿಬೆನ್ನೂರ 21: ನರೇಗಾ ಯೋಜನೆಯಡಿ ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ ನೂರು ದಿನಗಳ ಖಾತ್ರಿ ಕೆಲಸ ಒದಗಿಸಿ, ಪ್ರತಿ ದಿನಕ್ಕೆ ಒಬ್ಬರಿಗೆ 275 ರೂ.ಗಳ ಕೂಲಿಯಂತೆ ಹಾಗೂ ವರ್ಷಕ್ಕೆ 28500 ರೂ.ಗಳ ಆದಾಯ ಲಭಿಸಲಿದೆ. ಗ್ರಾಮೀಣಾಭಿವೃದ್ದಿ ಪಂಚಾಯತ್ರಾಜ್ ಇಲಾಖೆ ಮತ್ತು ತಾಲೂಕ ಪಂಚಯತಿ ವತಿಯಿಂದ ಮೂರು ತಿಂಗಳ ಕಾಲ ದುಡಿಯೋಣ ಬಾ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಇಓ ಟಿ.ಆರ್. ಮಲ್ಲಾಡದ ಹೇಳಿದರು.
ನಗರದ ತಾಲೂಕ ಪಂಚಾಯಿತಿ ಆವರಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನಾದ್ಯಂತ ಜೂನ್ 15 ರವರೆಗೆ ನಡೆಯಲಿರುವ ದುಡಿಯೋಣ ಬಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನ ಎಲ್ಲಾ 40 ಗ್ರಾಮ ಪಂಚಾಯತಿಗಳಲ್ಲಿ ಯೋಜನೆಯ ಕುರಿತು ಮಾರ್ಚ 15 ರಿಂದ 31 ರ ವರೆಗೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉದ್ಯೋಗ ಚೀಟಿ ಹೊಂದಿದ ಕುಟುಂಬಗಳಿಗೆ ಉದ್ಯೋಗ ಚೀಟಿಗಾಗಿ ಅರ್ಜಿ ಮತ್ತು ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲು ಕೂಲಿಕಾರರು ನಮೂನೆ 6 ರಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಬೇಕು. ನೋಂದಾಯಿತ ಕೂಲಿಕಾರರಿಂದ ಕೆಲಸದ ಬೇಡಿಕೆ ಪಡೆಯಲು ಗ್ರಾಮ ಪಂಚಾಯತಿಗಳಲ್ಲಿ ಬೇಡಿಕೆ ಪೆಟ್ಟಿಗೆಗಳನ್ನು ಇಡಲಾಗುವುದು. ಏಪ್ರೀಲ್ 1 ರಿಂದ ಕಾಮಗಾರಿಗಳನ್ನು ಆರಂಬಿಸಲಾಗುವುದು. ಏಪ್ರೀಲ್ 15 ರಿಂದ ಜೂನ್ 15 ರವರೆಗೆ ಪ್ರತಿ ಸೋಮವಾರ ಕೆಲಸದ ಬೇಡಿಕೆ ಪೆಟ್ಟಿಗೆ ತೆರೆದು 2 ದಿನಗಳಲ್ಲಿ ಉದ್ಯೋಗ ಒದಗಿಸಲಾಗುವುದು ಎಂದು ಮಲ್ಲಾಡದ ತಿಳಿಸಿದರು.
ಅಭಿಯಾನದ ಅವಧಿಯಲ್ಲಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕನಿಷ್ಠ ನೂರು ರೈತರ ಜಮೀನುಗಳಲ್ಲಿ ಬದು, ಕೃಷಿ ಹೊಂಡ, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕನಿμÀ್ಠ 50 ಸೋಕ್ ಪಿಟ್ ಕೆರೆಗಳ ನಿರ್ಮಾಣ ಮಾಡುವ ಮೂಲಕ ಆಭಿವೃದ್ದಿ ಪಡಿಸಲಾಗುವುದು. ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಃಶೇಚ್ತನ, ಕೆರೆ ಹೂಳು ತೆಗೆಯುವುದು. ಕೆರೆ ಏರಿ ಮತ್ತು ಕೋಡಿ ದುರಸ್ಥಿ, ರೈತರ ಜಮೀನುಗಳಿಗೆ ನೀರು ಹರಿದು ಹೋಗುವ ಕಾಲುವೆಗಳ ಪುನಃಶೇತನ ಮತ್ತು ಕೆರೆ ಹಂಚಿನಲ್ಲಿ ಅರಣ್ಯೀಕರಣ ಕಾಮಗಾರಿಗಳನ್ನು ನಡೆಸಲಾಗುವುದು ಎಂದರು.
ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರೆವ್ವ ಹೊನ್ನಾಳಿ, ತಾಪಂ ಸಹಾಯಕ ನಿರ್ದೇಶಕ ಅಶೋಕ ನಾರಜ್ಜಿ, ಲಿಂಗದಹಳ್ಳಿ, ಬೆನಕನಕೊಂಡ, ಕಾಕೋಳ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓಗಳು, ಸಂಯೋಜಕ ಡಿ.ವಿ. ಅಂಗೂರು ಮತ್ತು ಸಿಬ್ಬಂದಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು.