ಯಡಿಯೂರಪ್ಪನವರ ದೂರದೃಷ್ಟಿಯಿಂದ ತಾಂಡಗಳ ಅಭಿವೃದ್ಧಿ
ಶಾಸಕ ಅರುಣಕುಮಾರ ಪೂಜಾರ ಅಭಿಮತ | ಶ್ರೀನಿವಾಸಪುರ ತಾಂಡಾ ಕಾಂಕ್ರೆಟ್ ರಸ್ತೆಗೆ ಚಾಲನೆ
ರಾಣೇಬೆನ್ನೂರು 08: ತಾಂಡಾಗಳ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಸರಕಾರವು ತನ್ನ ಆಡಳಿತದ ಅವಧಿಯಿಂದಲೂ ಸದಾ ಕಾಲ ಬದ್ದವಾಗಿದೆ. ಅದರಂತೆ ಇದೀಗ ರಾಜ್ಯದಲ್ಲಿ ತಾಂಡಾಗಳ ಸಂಪೂರ್ಣ ಅಭಿವೃದ್ಧಿ ಕಾಣುತ್ತಿರುವುದು ಈ ರಾಜ್ಯದ ಗ್ರಾಮೀಣ ಪ್ರದೇಶಗಳ ಪರಿಪೂರ್ಣ ಅಭಿವೃದ್ಧಿಯ ಸಂಕೇತವಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ತಾಲೂಕಿನ ಶ್ರೀನಿವಾಸಪುರ ತಾಂಡೆಯಲ್ಲಿ ರವಿವಾರ 65 ಲಕ್ಷ ರೂ. ವೆಚ್ಚದ ಕಾಂಕ್ರೇಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ನಡೆದ ಸರಳ ಸಮಾರಂಭದಲ್ಲಿ ಸಮುದಾಯವನ್ನುದ್ದೇಶಿಸಿ ಮಾತನಾಡಿದರು.
ದೇಶ ಮತ್ತು ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಈಗಾಗಲೇ ಪದ್ಮಾವತಿಪುರ, ಹುಣಸಿಕಟ್ಟಿ, ರಾವುತನಕಟ್ಟಿ ಸೇರಿದಂತೆ ಮತ್ತಿತರ ತಾಂಡಾಗಳಲ್ಲಿ ಅಗತ್ಯವಿರುವ ಕಾಮಗಾರಿಗಳ ಜೊತೆಗೆ ವಿಶೇಷ ಕಾಮಗಾರಿಯು ಸಹ ನೆರವೇರಿಸಲಾಗಿದೆ. ಇದರಿಂದ ತಾಂಡಾಗಳು ಯಾವುದೇ ಸಮಸ್ಯೆಗಳಿಲ್ಲದೆ ಸ್ವಚ್ಚಂದವಾಗಿ ತಮ್ಮ ಬದುಕು ಸಾಗಿಸುವಂತಾಗಿದೆ ಎಂದ ಅವರು, ಅಧಿಕಾರ ಎಂದಿಗೂ ಶಾಶ್ವತವಲ್ಲ. ತಾವು ಮಾಡುವ ಜನಪರ ಸೇವೆ ಸದಾ ಕಾಲ ಶಾಶ್ವತವಾಗಿರುತ್ತವೆ ಎಂದರು.
ಬರುವ 2023ರ ಒಳಗಾಗಿ ಇಲ್ಲಿನ ನಾಗರೀಕರ ಮತ್ತು ತಾಂಡೆಯ ಸಮುದಾಯದ ಬೇಡಿಕೆಯಂತೆ ಲೋಕಸಭಾಸದಸ್ಯರೊಂದಿಗೆ ಚರ್ಚಿಸಿ ರೈಲ್ವೆ ಮೇಲ್ಸೆತುವೆ ನಿರ್ಮಾಣಕ್ಕೆ ತಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ತುಂಗಾ ಮೇಲ್ದಂಡೆ ನೀರಾವರಿ ಯೋಜನೆಯಿಂದ ಜಾರಿಯಾಗುತ್ತಿರುವ ನಗರ 24*7 ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ತಾಂಡೆಗಳಿಗೆ ಕಲ್ಪಿಸಲು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು. ಸಿಎಂ ಯಡಿಯೂರಪ್ಪನವರ ನಿರಂತರ ಪ್ರಯತ್ನದ ಫಲವಾಗಿ ಪ.ಜಾ, ಪ.ಪಂ ಕಾಲೋನಿಗಳಿಗೆ ವಿಶೇಷವಾದ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಲ್ಲಿ 25 ಸಾವಿರ ಕೋಟಿ ರೂ ಅನುದಾನ ಮೀಸಲಾಗಿಟ್ಟಿದ್ದು, ಅದರಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿರುವುದು ಅತ್ಯಂತ ಶ್ಲ್ಯಾಘನೀಯ ಕಾರ್ಯವಾಗಿದೆ ಎಂದರು. ಇದೇ ತಿಂಗಳು ನಗರದಲ್ಲಿ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡಲು ರಾಜ್ಯದ ಮುಖ್ಯಮಂತ್ರಿಗಳು ನಗರಕ್ಕೆ ಧಾವಿಸಲಿದ್ದಾರೆ. ಅಂದೇ ನಗರ ನೀರು ಸರಬರಾಜು ಮತ್ತು ಕೆರೆ ತುಂಬಿಸುವ ಬೃಹತ್ ಯೋಜನೆ ಉದ್ಘಾಟಿಸಲಿದ್ದಾರೆ ಎಂದರು.
ವೇದಿಕೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ರಮೇಶ್ ಡಿ ನಾಯಕ್, ನಗರಸಭೆ ಸದಸ್ಯ ಪ್ರಕಾಶ್ ಪೂಜಾರ, ಗ್ರಾಪಂ ಅಧ್ಯಕ್ಷ ಪರಮೇಶ್ ಲಮಾಣಿ, ಉಪಾಧ್ಯಕ್ಷೆ ಸುಶೀಲಾ ಲಮಾಣಿ, ಎಸ್ಡಿಎಂಸಿ ಅಧ್ಯಕ್ಷ ರವಿ ಲಮಾಣಿ, ದಿಳ್ಳೆಪ್ಪ ಲಮಾಣಿ, ಲಕ್ಷ್ಮಣ ನಾಯಕ್, ಲೋಕೇಶ ಲಮಾಣಿ, ಉಮೇಶ ಲಮಾಣಿ, ಪ್ರಕಾಶ್ ಲಮಾಣಿ, ಹನುಮಂತಪ್ಪ ಲಮಾಣಿ, ಮಂಜಪ್ಪ ಲಮಾಣಿ, ನೇಮಪ್ಪ ಲಮಾಣಿ, ಯುವರಾಜ ಚವಾಣ್, ಅಶೋಕ ಚವ್ಹಾಣ, ಮಧು ಲಮಾಣಿ, ಸುನೀಲ್ ಚವಾಣ್, ಗುತ್ತಿಗೆದಾರ ರವಿ ಸಿದ್ದಪ್ಪಗೌಡ್ರ, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಚೇತನ್ಕುಮಾರ ನಾಯಕ್ ಸೇರಿದಂತೆ ಮತ್ತಿತರ ಗಣ್ಯರು, ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.