ವಿವಿಧ ಕಾಮಗಾರಿಗೆ ಸಾಹೇಬಗೌಡ ಚಾಲನೆ
ತಾಳಿಕೋಟಿ: ದೇ.ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಸುಮಾರು 120ಗ್ರಾಮಗಳನ್ನು ಅಭಿವೃದ್ಧಿಪಡಿಸುವದರ ಮೂಲಕ ಈ ಕ್ಷೇತ್ರವನ್ನು ಜಿಲ್ಲೆಯ ಒಂದು ಮಾದರಿ ಮತಕ್ಷೇತ್ರವನ್ನಾಗಿ ಮಾಡುವುದು ನನ್ನ ಸಹೋದರ ಶಾಸಕ ಸೋಮನಗೌಡ ಪಾಟೀಲ ಅವರ ಗುರಿಯಾಗಿದೆ ಎಂದು ಸಾಹೇಬಗೌಡ ಪಾಟೀಲ ತಿಳಿಸಿದರು.
ತಾಲೂಕಿನ ಜಲಪೂರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ವ್ಯಾಪ್ತಿಯ ರೂ. 50ಲಕ್ಷ ಮೋತ್ತದ ಸಿ.ಸಿ. ರಸ್ತೆ ಕಾಮಗಾರಿ, ಬೂದಿಹಾಳ ಪಿ.ಟಿ ಗ್ರಾಮದಲ್ಲಿ ರೂ. 50ಲಕ್ಷ ಸಿ.ಸಿ. ರಸ್ತೆ, ಹಾಗೂ ಕಲಕೇರಿ ಗ್ರಾಮದಲ್ಲಿ 50ಲಕ್ಷ ಮೊತ್ತದ ಸಿ.ಸಿ. ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ದೇ.ಹಿಪ್ಪರಗಿ ಪಟ್ಟಣ ಪಂಚಾಯತ ಸದಸ್ಯ ರಮೇಶ ಮಸಿಬನಾಳ ಮಾತನಾಡಿ ಈ ಹಿಂದೆ ಇದ್ದ ಶಾಸಕರ ಅವಧಿಯಲ್ಲಿ ಈ ಮತಕ್ಷೇತ್ರ ಯಾವುದೆ ರೀತಿಯ ಅಭಿವೃದ್ಧಿ ಕಂಡಿರಲಿಲ್ಲ. ಶಾಸಕ ಸೋಮನಗೌಡರು ಬಂದ ನಂತರ ಕ್ಷೇತ್ರಾದ್ಯಂತ ಸಾವಿರಾರು ಕೋಟಿ ಕಾಮಗಾರಿಗಳು ನಡೆಯುತ್ತಿವೆ. ಇದು ಕ್ಷೇತ್ರದ ಜನರ ಕುರಿತು ಅವರ ಕಾಳಜಿ ಹಾಗೂ ಜವಾಬ್ದಾರಿಕೆಯ ಪ್ರಜ್ಞೆಯನ್ನು ಎತ್ತಿ ತೋರಿಸುತ್ತದೆ. ಮುಂಬರುವ ಚುನಾವಣೆಯಲ್ಲಿ ತಾವು ಅಭಿವೃದ್ದಿಯನ್ನು ನೋಡಿ ಮತ ನೀಡಿ ಎಂದರು.
ಬಿ ಜೆ ಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದು ಬುಳ್ಳಾ ಅವರು ಸ್ವಾತಂತ್ರ್ಯ ಬಂದ ನಂತರದಲ್ಲಿಯೂ ಅಭಿವೃದ್ಧಿ ಕಾಣದ ಈ ಭಾಗದ ಗ್ರಾಮಗಳ ರಸ್ತೆಗಳು ಶಾಸಕ ಸೋಮನಗೌಡರು ಬಂದ ನಂತರ ಇಂದು ಅಭಿವೃದ್ಧಿ ಕಾಣುತ್ತಿವೆ. ಕೊಟ್ಟ ಮಾತಿನಂತೆ ನಡೆಯುವ ವ್ಯಕ್ತಿ ಯಾರಾದರು ಇದ್ದರೆ ಅದು ಸೋಮನಗೌಡರಾಗಿದ್ದಾರೆ. ಅವರ ಕೈ ಬಲ ಪಡಿಸುವ ಕಾರ್ಯ ನಾವು ನೀವೆಲ್ಲ ಮಾಡಬೇಕಾಗಿದೆ ಎಂದು ಹೇಳಿದರು.
ಬೆಕಿನಾಳ ಗ್ರಾ. ಪಂ. ಅಧ್ಯಕ್ಷ ರವಿ ಸುಧಾಕರ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಮಹೇಶಗೌಡ ಹಿರೇಗೌಡರ, ಪ್ರಕಾಶ ಯರನಾಳ(ಕಲಕೇರಿ), ರಾಯನಗೌಡ ನೀರಲಗಿ, ರಾಮನಗೌಡ ನಾವದಗಿ, ಬಸನಗೌಡ ಬಿರಾದಾರ, ಗುತ್ತಿಗೆದಾರ ಎಸ್. ಎನ್. ಪಾಟೀಲ, ಮುದಕಣ್ಣ ಚೌದ್ರಿ, ಚನ್ನ ಬಸಯ್ಯ ಹಿರೇಮಠ, ಮಲ್ಲಯ್ಯ ಹಿರೇಮಠ, ಎಇಇ ಭಾಗ್ಯಶ್ರೀ ಕಟಗೇರಿ, ಎಇ ವಿ.ಬಿ ನಾಯಕ, ಮತ್ತಿತರರು ಉಪಸ್ಥಿತರಿದ್ದರು.